ಶ್ರೀಮಂಗಲ, ಆ. 28: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ ಗ್ರಾಮದ ಬೆಳೆಗಾರರೊಬ್ಬರ ತೋಟದಲ್ಲಿ ದುಷ್ಕರ್ಮಿಗಳು ಮರಗಳಿಗೆ ಹಬ್ಬಿಸಿದ ಫಸಲು ಬರುವ ಕರಿಮೆಣಸು ಬಳ್ಳಿಗಳನ್ನು ಕತ್ತರಿಸಿ ಹಾಕಿರುವ ಘಟನೆ ನಡೆದಿದ್ದು, ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುರ್ಚಿ ಗ್ರಾಮದ ಅಜ್ಜಮಾಡ ಕೆ. ಕೃಷ್ಣ ಅವರ ತೋಟದಲ್ಲಿ ಸುಮಾರು 10-14 ವರ್ಷಗಳ ಫಸಲು ಬರುವಂತಹ ಪ್ರಸಕ್ತ ವರ್ಷದ ಫಸಲು ಸರ ಕಟ್ಟಿರುವ 10 ರಿಂದ 30 ಅಡಿ ಎತ್ತರದ ಸುಮಾರು 10-15 ಬಳ್ಳಿಗಳನ್ನು ಬುಡ ಭಾಗದಲ್ಲಿ ಕತ್ತರಿಸಲಾಗಿದ್ದು, ಕತ್ತರಿಸ್ಪಟ್ಟ ಬಳ್ಳಿಗಳು ಒಣಗುತ್ತಿದೆ. ತಮ್ಮ ತೋಟದಲ್ಲಿ ಕರಿಮೆಣಸು ಬಳ್ಳಿಗಳು ಒಣಗುತ್ತಿರುವ ಬಗ್ಗೆ ತೋಟದ ಮಾಲೀಕ ಅಜ್ಜಮಾಡ ಕೃಷ್ಣ ಪರಿಶೀಲಿಸಿದಾಗ ಬಳ್ಳಿಗಳ ಬುಡಭಾಗ ಕತ್ತರಿಸಲ್ಪಟ್ಟಿರುವದು ಗೋಚರಿಸಿದೆ.

ಸ್ಥಳಕ್ಕೆ ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಜಿಲ್ಲಾ ಬೆಳೆಗಾರ ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ ಭೇಟಿ ನೀಡಿ ಪರಿಶೀಲಿಸಿದ್ದು, ಇದೊಂದು ಅನಾಗರಿಕ ಕೃತ್ಯವಾಗಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಕರಿಮೆಣಸು ಫಸಲಿಗೆ ಉತ್ತಮ ಬೆಲೆ ಇದ್ದು, ಈ ಸಮಯದಲ್ಲಿ ಬಳ್ಳಿ ದುಷ್ಕರ್ಮಿಗಳಿಂದ ನಾಶವಾಗಿದ್ದು, ಅತೀವ ಬೇಸರವಾಗಿದೆ. ಕತ್ತರಿಸಲ್ಪ್ಪಟ್ಟ ಬಳ್ಳಿಗಳು 10-15 ವರ್ಷಗಳ ಬಳ್ಳಿಯಾಗಿದ್ದು, ಮತ್ತೆ ಇಂತಹ ಬಳ್ಳಿ ನೆಟ್ಟು ಫಸಲಿಗೆ ಬರುವದಕ್ಕೆ ಕನಿಷ್ಟ 5-6 ವರ್ಷಗಳು ಬೇಕಾಗುತ್ತದೆ ಎಂದು ತೋಟದ ಮಾಲೀಕ ಅಜ್ಜಮಾಡ ಕೃಷ್ಣ ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.