ಸೋಮವಾರಪೇಟೆ, ಡಿ.11: ಪಶ್ಚಿಮಘಟ್ಟ ಪುಷ್ಪಗಿರಿ ತಪ್ಪಲಿನ ಗ್ರಾಮೀಣ ಜನರ ಕನಸಿನ ಶಾಂತಳ್ಳಿ ಬೆಟ್ಟದಳ್ಳಿ ಕುಮಾರಲಿಂಗೇಶ್ವರ ಪ್ರೌಢಶಾಲೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ವನ್ನು ಗ್ರಾಮಸ್ಥರು, ಶಾಲೆಯ ಸಿಬ್ಬಂದಿ ಗಳು ಹಾಗು ಹಿರಿಯ ವಿದ್ಯಾರ್ಥಿಗಳು ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಿದರು.

ಸಂಭ್ರಮ- 50 ಹೆಸರಿನಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದ ಗ್ರಾಮೀಣ ಜನರು ಸಂಭ್ರಮಪಟ್ಟರು. ಹಿರಿಯ ವಿದ್ಯಾರ್ಥಿಗಳಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಮಡಿಕೆ ಒಡೆಯುವದು ಸೇರಿದಂತೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆದವು. ಸಂಜೆ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಆಡಳಿತ ಮಂಡಳಿ ಹಾಗು ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಶಾಲಾಭಿವೃದ್ಧಿ ಸಮಿತಿಯ ಕೆ.ಎಸ್.ರಾಮಚಂದ್ರ, ಶಾಲೆಯ ಮೊದಲ ಮುಖ್ಯ ಶಿಕ್ಷಕ ಟಿ.ಎ.ಸುಬ್ಬಯ್ಯ, ನಿವೃತ್ತ ಮುಖ್ಯ ಶಿಕ್ಷಕರಾದ ಗುಂಡೇಗೌಡ, ಎಸ್.ವಿ. ವಿಠಲ್, ಕಾಳಯ್ಯ, ನಿವೃತ್ತ ಶಿಕ್ಷಕರಾದ ಕೆ.ವಿ. ನಾರಾಯಣ, ಡಿ.ಪಿ.ಹೂವಯ್ಯ, ಆರ್.ಎಸ್. ಸುಬ್ರಮಣ್ಯ, ಕಮಲ ಸಿದ್ದೇಗೌಡ, ಸಾವಿತ್ರಿ ಕಾಳಪ್ಪ, ಮೊಗಪ್ಪ, ವಿಜಯ, ನಿವೃತ್ತ ಸಿಬ್ಬಂದಿಗಳಾದ ಜಿ.ವಿ.ಗುರಪ್ಪ, ಡಿ.ಟಿ.ಉತ್ತಯ್ಯ, ಪುಷ್ಪ ಕುಶಾಲಪ್ಪ, ಜಿ.ಎಸ್.ಪೂವಯ್ಯ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ,

(ಮೊದಲ ಪುಟದಿಂದ) ಗ್ರಾಮೀಣ ಭಾಗದ ಹಿರಿಯ ಚೇತನಗಳು, ಮುಂದಿನ ಪೀಳಿಗೆ ವಿದ್ಯಾವಂತರಾಗಬೇಕು ಎಂಬ ಸದುದ್ದೇಶದಿಂದ ಗ್ರಾಮೀಣ ಭಾಗದಲ್ಲಿ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ದೇಶ ಕಂಡ ಮಹಾನ್ ವ್ಯಕ್ತಿಗಳು ಸರ್ಕಾರಿ ಶಾಲೆಯಲ್ಲೇ ಓದಿದವರು, ಪ್ರತಿಯೊಬ್ಬರಿಗೂ ಕಲಿಯುವ ಛಲ, ನಿರ್ದಿಷ್ಠ ಗುರಿ ಇದ್ದರೆ ಸಾಧನೆಯ ಮೆಟ್ಟಿಲೇರಬಹುದು ಎಂದರು.

ಇನ್ನೋರ್ವ ಅತಿಥಿ ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ವಿದ್ಯೆ ದೇಶದ ನಿಜವಾದ ಸಂಪತ್ತು. ಜ್ಞಾನ ಸಮಾಜದ ಕಲ್ಯಾಣಕ್ಕೆ ಉಪಯೋಗವಾಗಬೇಕು. ಜ್ಞಾನ ಬಾಡಿದ ಹೂವಾಗಬಾರದು, ಸುಗಂಧಮಯವಾಗಿರಬೇಕು. ಪ್ರತಿಯೊಬ್ಬರು ಗುರುಗಳನ್ನು ಗೌರವಿಸಬೇಕು ಎಂದು ಹೇಳಿದರು. ಬೆಟ್ಟದಳ್ಳಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಥಾಪಿಸಲು ಈ ಶಾಲೆಯ ಹಳೆ ವಿದ್ಯಾರ್ಥಿಗಳಾದ ಹರಪಳ್ಳಿ ರವೀಂದ್ರ, ಕೊತ್ನಳ್ಳಿ ಅರುಣ್ ಕುಮಾರ್ ಹಾಗು ಇನ್ನಿತರ ದಾನಿಗಳು ಮುಂದಾಗಿರುವದು ಸ್ವಾಗತಾರ್ಹ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಹ್ಮಣಿ, ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬೆಂಗಳೂರಿನ ಸಂಪನ್ಮೂಲ ತರಬೇತುದಾರ ವೈ.ವಿ.ಗುಂಡೂರಾವ್, ದಾನಿಗಳಾದ ಎಚ್.ಎನ್.ರವೀಂದ್ರ, ಡಿ.ಕೆ. ಅರುಣ್ ಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್, ಶಾಂತಳ್ಳಿ ಗ್ರಾಪಂ ಅಧ್ಯಕ್ಷ ಅನಿಲ್ ಕುಮಾರ್, ಬೆಟ್ಟದಳ್ಳಿ ಗ್ರಾಪಂ ಅಧ್ಯಕ್ಷೆ ಪವಿತ್ರ, ತಾಪಂ ಸದಸ್ಯ ಧರ್ಮಪ್ಪ, ಮುಖ್ಯ ಶಿಕ್ಷಕಿ ಬಿ.ಟಿ. ರತ್ನಾವತಿ ಮತ್ತಿತರರು ಉಪಸ್ಥಿತರಿದ್ದರು.