ಸೋಮವಾರಪೇಟೆ,ಡಿ.1: ಕೋಮು ಸೂಕ್ಷ್ಮ ಪ್ರದೇಶವೆಂದೇ ಪರಿಗಣಿಸಲ್ಪಟ್ಟಿರುವ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸತೋಟದಲ್ಲಿ ಮುಸ್ಲಿಂ ಹಾಗೂ ಮಲೆಯಾಳಿ ಸಮುದಾಯವನ್ನು ನಿಂದಿಸುವ ಆಕ್ಷೇಪಾರ್ಹ ಪದಗಳನ್ನು ಒಳಗೊಂಡಿರುವ ಭಿತ್ತಿಪತ್ರಗಳು ಪ್ರತ್ಯಕ್ಷಗೊಂಡು, ಹೊಸತೋಟ ಗ್ರಾಮ ಕೆಲಕಾಲ ಉದ್ವಿಗ್ನ ಸ್ಥಿತಿಗೆ ತಲುಪಿದ ಘಟನೆ ಇಂದು ನಡೆದಿದೆ.

ಹೊಸತೋಟ ಜಂಕ್ಷನ್‍ನಲ್ಲಿರುವ ಮೋಣಪ್ಪ ಎಂಬವರ ಟೈಲರಿಂಗ್ ಅಂಗಡಿಯ ಗೋಡೆಯಲ್ಲಿ ಆಕ್ಷೇಪಾರ್ಹ ಪದಗಳಿರುವ ಭಿತ್ತಿ ಪತ್ರಗಳು ಕಂಡುಬಂದ ಹಿನ್ನೆಲೆ ಸ್ಥಳೀಯರು ಸೋಮವಾರಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಪೋಸ್ಟರ್‍ಗಳನ್ನು ವಶಕ್ಕೆ ಪಡೆದು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.

“ನಾನು ಮೇಲೆ ನಾನು- ಕೇರಳ ಮತ್ತು ಕೇರಳ” ಎಂಬ ತಲೆ ಬರಹ ಇರುವ ಕೈಬರಹದ ಭಿತ್ತಿಪತ್ರದಲ್ಲಿ ಮಲೆಯಾಳಿ ಹಾಗೂ ಮುಸ್ಲಿಂ ಸಮುದಾಯಗಳನ್ನು ನಿಂದಿಸುವ ಪದಗಳನ್ನು ಬರೆಯಲಾಗಿದೆ. ಕೇರಳದಿಂದ ಬಂದ ಮುಸ್ಲಿಂ ಹಾಗೂ ಮಲೆಯಾಳಿಗಳ ನಡುವೆ ಗ್ಯಾಂಗ್‍ವಾರ್ ನಡೆಯುತ್ತಿದೆ. ಅಧಿಕಾರದ ಆಸೆಗೆ ಬಲಿಬಿದ್ದಿದ್ದಾರೆ ಎಂದು ಭಿತ್ತಿಪತ್ರದಲ್ಲಿ ಬರೆದಿದ್ದು, ಇದರೊಂದಿಗೆ ಕೀಳುಮಟ್ಟದ ಪದಪ್ರಯೋಗ ಮಾಡಲಾಗಿದೆ.

ಟೈಲರಿಂಗ್ ವೃತ್ತಿ ಮಾಡುತ್ತಾ ತಮ್ಮಷ್ಟಕ್ಕೆ ತಾವಿರುವ ಮೋಣಪ್ಪ ಅವರ ಅಂಗಡಿಯ ಗೋಡೆ ಮೇಲೆ ಇಂತಹ ಎರಡು ಭಿತ್ತಿಪತ್ರಗಳನ್ನು ಅಂಟಿಸಲಾಗಿದ್ದು, ‘ನಾನು ಮೇಲೆ ನೀನು ಕೆಳಗೆ, ಇದು ನಿಲ್ಲದ ಸಮಸ್ಯೆ, ಇನ್ನಾದರೂ ತಿಳಿದುಕೊಳ್ಳಿ, ಬೇರೆ ಜನಾಂಗದವರು ಅರ್ಥ ಮಾಡಿಕೊಳ್ಳಿ, ಅರ್ಥ ಮಾಡಿಸಿ,-ಬುದ್ಧಿವಂತ ಮೋಣಪ್ಪ’ ಎಂದು ಟೈಲರ್ ಮೋಣಪ್ಪ ಅವರ ಹೆಸರನ್ನು ಬಳಸಿಕೊಳ್ಳಲಾಗಿದೆ.

ನಿನ್ನೆ ರಾತ್ರಿ ವೇಳೆಯಲ್ಲಿ ಕಿಡಿಗೇಡಿಗಳು ಇಂತಹ ಕೃತ್ಯ ನಡೆಸಿದ್ದು, ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಷಯ ತಿಳಿಯುತ್ತಲೇ

(ಮೂರನೇ ಪುಟದಿಂದ) ಐಗೂರು ಸೇರಿದಂತೆ ಸುತ್ತಮುತ್ತಲಿನ ಜನರು ಹೊಸತೋಟಕ್ಕೆ ಆಗಮಿಸಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಭಿತ್ತಿಪತ್ರಗಳನ್ನು ವಶಕ್ಕೆ ಪಡೆದುಕೊಂಡು, ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.

ನಿನ್ನೆಯಷ್ಟೇ ಐಗೂರಿನ ಮಸೀದಿಗೆ ಭೇಟಿ ನೀಡಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಎ.ಕೆ. ಸುಬ್ಬಯ್ಯ ಅವರು, ಸಂಘ ಪರಿವಾರ ಮತ್ತು ಆರ್‍ಎಸ್‍ಎಸ್‍ನಲ್ಲಿರುವ ಕೆಲ ಹಿಂದೂ ಮಲಯಾಳಿಗಳು ಮತ್ತು ಬಿಲ್ಲವರ ಒಂದು ಗುಂಪು ವ್ಯವಸ್ಥಿತವಾಗಿ ಕೋಮುಗಲಭೆಯನ್ನು ಸೃಷ್ಟಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ರಾಜಕೀಯ ಮುಖಂಡರ ಹೇಳಿಕೆಗಳಿಗೆ ಪರ ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ಇದರ ಮುಂದುವರೆದ ಭಾಗ ಎಂಬಂತೆ ನಿನ್ನೆ ರಾತ್ರಿ ಕಿಡಿಗೇಡಿಗಳು ಎರಡು ಸಮುದಾಯಗಳನ್ನು ನಿಂದಿಸುವ ರೀತಿಯಲ್ಲಿ ಕೈಬರಹದ ಭಿತ್ತಿಪತ್ರಗಳನ್ನು ಅಂಟಿಸಿ ಸಾಮಾಜಿಕ ಶಾಂತಿ ಕದಡಿಸುವ ದುಷ್ಕøತ್ಯಕ್ಕೆ ಕೈಹಾಕಿದ್ದಾರೆ. - ವಿಜಯ್ ಹಾನಗಲ್