ಸಿದ್ದಾಪುರ, ಜೂ. 15: ಸಮೀಪದ ಚನ್ನಯ್ಯನಕೊಟೆ ಗ್ರಾ.ಪಂ. ವ್ಯಾಪ್ತಿಯ ಅಬ್ಬೂರಿನ ಅರಣ್ಯ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿದ್ದ ನಿವೇಶನ ರಹಿತ ಕುಟುಂಬಗಳನ್ನು ಅರಣ್ಯ ಇಲಾಖೆ ತೆರವು ಗೊಳಿಸಿರುವದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ಮಾಡುವದಾಗಿ ದಲಿತ ಮುಖಂಡ ಗಣೇಶ್ ಎಚ್ಚರಿಸಿದ್ದಾರೆ.

ಈ ಕುರಿತು ಮಾತನಾಡಿ ಅವರು, ಈ ಭಾಗದಲ್ಲಿ ತೋಟ ಕಾರ್ಮಿಕರೇ ಹೆಚ್ಚಾಗಿದ್ದು, ನಿವೇಶನ ರಹಿತರಾಗಿದ್ದಾರೆ. ಹಲವು ಬಾರಿ ಪೈಸಾರಿ ಜಾಗಕ್ಕಾಗಿ ಮನವಿ ಮಾಡಿದ್ದರೂ ಇಲಾಖೆ ಜಾಗ ನೀಡಲು ಮುಂದಾಗಿಲ್ಲ. ಅಬ್ಬೂರು ಬಳಿಯ 3 ಏಕರೆ ಅರಣ್ಯ ಪೈಸಾರಿ ಜಾಗದಲ್ಲಿ ಒಂದು ತಿಂಗಳ ಹಿಂದೆ ಗುಡಿಸಲು ಗಳನ್ನು ನಿರ್ಮಿಸಿಕೊಂಡಿದ್ದರು.

ಅರಣ್ಯ ಇಲಾಖೆ ತೆರುವುಗೊಳಿಸಿರುವದನ್ನು ಖಂಡಿಸಿ ಹೋರಾಟ ಮಾಡುವದಾಗಿ ಹೇಳಿದ ಅವರು, ಈ ಭಾಗದ ಸರ್ವೆಯಲ್ಲಿ 11 ಏಕರೆ ಜಾಗ ಒತ್ತುವರಿಯಾಗಿದ್ದು, ಇದನ್ನು ಬಿಡಿಸದ ಅರಣ್ಯ ಇಲಾಖೆ ಬಡವರ ಹೊಟ್ಟೆಗೆ ಹೊಡಿಯುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಕಾನೂನು ಹೊರಾಟ ನಡೆಸುವದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸುತ್ತಮುತ್ತಲಿನ ಕಾರ್ಮಿಕ ಕುಟುಂಬದವರು ಹಾಜರಿದ್ದರು.