ಗೋಣಿಕೊಪ್ಪಲು, ಜೂ. 10: ಪೆÇನ್ನಂಪೇಟೆ ಹೋಬಳಿ ಕಿರುಗೂರು ವೃತ್ತದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರ ದೂರಿನ ಮೇರೆಗೆ ಶ್ರೀಮಂಗಲಕ್ಕೆ ವರ್ಗಾಯಿಸಿದ್ದು, ಇದೀಗ ಮತ್ತೆ ಕಿರುಗೂರು ವ್ಯಾಪ್ತಿಗೆ ವಾಪಾಸ್ಸು ಬರಲು ವಶೀಲಿ ಬೀರುತ್ತಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಗ್ರಾಮದ ಚೆಪ್ಪುಡಿರ ಕುಟ್ಟಪ್ಪ, ಮಾಜಿ ಗ್ರಾ.ಪಂ. ಉಪಾಧ್ಯಕ್ಷೆ ಸುಶೀಲ, ಗ್ರಾ.ಪಂ. ಸದಸ್ಯೆ ಹೆಚ್.ಎಂ. ವಿಮಲ, ಹೆಚ್.ಸಿ. ಗಣೇಶ್ ಸೇರಿದಂತೆ ಸುಮಾರು 30 ಮಂದಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳಿಗೆ ಲಿಖಿತ ದೂರು ನೀಡಿ ಆಗ್ರಹಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಕಿರುಗೂರು ವ್ಯಾಪ್ತಿಯಲ್ಲಿ ಗ್ರಾಮ ಸಹಾಯಕನಾಗಿದ್ದ ಹೆಚ್.ಜಿ. ಚಂದ್ರ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಮಾಡುವ ಸಲುವಾಗಿ ಅಗತ್ಯ ದಾಖಲೆಗಳಿಗೆ ಗರಿಷ್ಠ ರೂ. 3000 ಹಣದ ಬೇಡಿಕೆ, ಆರ್‍ಟಿಸಿ ಇತ್ಯಾದಿ ಕಡತ ವಿಲೇವಾರಿಗೆ ಗ್ರಾಮ ಲೆಕ್ಕಿಗರು, ಕಂದಾಯ ಪರಿವೀಕ್ಷಕರು, ತಹಶೀಲ್ದಾರರು, ಉಪ ವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಇಂತಿಷ್ಟು ಮೊತ್ತ ನೀಡಬೇಕೆಂದು ಕೃಷಿಕರಿಂದ ಗರಿಷ್ಠ ರೂ. 80 ಸಾವಿರದವರೆಗೂ ಸುಲಿಗೆ ಮಾಡುತ್ತಿರುವದಾಗಿ ಸಿ.ಟಿ. ಕುಟ್ಟಪ್ಪ ಮತ್ತಿತರರು ಆರೋಪಿಸಿದ್ದಾರೆ.

ರೂ. 500 ರ ವೇತನಕ್ಕೆ ಗ್ರಾಮ ಸಹಾಯಕನಾಗಿ ಸೇರಿದ್ದ ಸದರಿ ಚಂದ್ರ ಅವರ ವೇತನ ಇದೀಗ ರೂ. 10 ಸಾವಿರದ ಆಸುಪಾಸಿನಲ್ಲಿದೆ. ಆದರೆ, ಆದಾಯಕ್ಕಿಂತಲೂ ಅಧಿಕ ಆಸ್ತಿ ಹೊಂದಿದ್ದು, ಈ ಬಗ್ಗೆ ಕೂಲಂಕಶ ತನಿಖೆ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ನೀಡಿರುವ ಪುಕಾರಿನಲ್ಲಿ ಕುಶಾಲನಗರ, ಪೆÇನ್ನಂಪೇಟೆ, ಗೋಣಿಕೊಪ್ಪಲು, ಅರುವತ್ತೊಕ್ಕಲು ಹಾಗೂ ಮತ್ತೂರು ಇತ್ಯಾದಿ ಕಡೆಗಳಲ್ಲಿ ಆಸ್ತಿಗಳಿದ್ದು, ರೂ. 50 ಲಕ್ಷಕ್ಕೂ ಅಧಿಕ ಬೆಲೆಬಾಳುವ ಐಷಾರಾಮಿ ಮನೆ ನಿರ್ಮಿಸಿ ಕೊಂಡಿದ್ದಾರೆ ಎಂದು ದೂರಿದ್ದಾರೆ.

ಪೆÇನ್ನಂಪೇಟೆ ಕಂದಾಯ ಇಲಾಖೆಯಲ್ಲಿ ಹಣ ನೀಡದಿದ್ದರೆ ಕಡತವೇ ವಿಲೇವಾರಿಯಾಗುವದಿಲ್ಲ. ಕೇಂದ್ರ ಸ್ಥಳದಲ್ಲಿ ಕಾರ್ಯನಿರ್ವಹಿಸದೆ ಸದಾ ವೀರಾಜಪೇಟೆ, ಮಡಿಕೇರಿ ವ್ಯಾಪ್ತಿಯಲ್ಲಿ ಸುತ್ತಾಡುತ್ತಿರುವದು ಕಂಡು ಬರುತ್ತಿದೆ. ಕೃಷಿಕರು ಹಾಗೂ ಬಡ ಕೂಲಿ ಕಾರ್ಮಿಕರ ಕೆಲಸ ಕಾರ್ಯಗಳು ಹಣವಿಲ್ಲದಿದ್ದರೆ ಆಗುವದೇ ಇಲ್ಲ ಎಂಬಂತಾಂಗಿದೆ. ಸದರಿ ಪುಕಾರನ್ನು ಪೆÇನ್ನಂಪೇಟೆ ನಾಡು ಕಚೇರಿ ಕಂದಾಯ ಪರಿವೀಕ್ಷಕರು, ವೀರಾಜಪೇಟೆ ತಹಶೀಲ್ದಾರರು, ಕೊಡಗು ಜಿಲ್ಲೆ ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಕಂದಾಯ ಸಚಿವರಿಗೆ ರವಾನಿಸಲಾಗಿದೆ.

ಗ್ರಾಮಸ್ಥರು ನೀಡಿದ ದೂರಿನನ್ವಯ ಹೆಚ್.ಜಿ. ಚಂದ್ರ ಅವರಿಂದ ಸಾರ್ವಜನಿಕ ಕಚೇರಿಯಲ್ಲಿ ತೊಂದರೆ ಯಾಗುತ್ತಿರುವದನ್ನು ಪರಿಗಣಿಸಿ, ಉಪ ವಿಭಾಗಾಧಿಕಾರಿ ಉಲ್ಲೇಖದ ಹಿನ್ನೆಲೆ ಶ್ರೀಮಂಗಲ ಕಚೇರಿಗೆ ವರ್ಗಾಯಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರರು ತಾ. 11.5.2016 ರಂದು ಅಧಿಕೃತ ಜ್ಞಾಪನಾ ಪತ್ರದಲ್ಲಿ ನಿರ್ದೇಶನ ನೀಡಿದ್ದು, ಪ್ರತಿಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವರ ಆಪ್ತ ಕಾರ್ಯದರ್ಶಿಗೂ ಮಾಹಿತಿಗಾಗಿ ರವಾನಿಸಿದ್ದಾರೆ. ತಾ. 15.5.2016 ರಿಂದಲೇ ಶ್ರೀಮಂಗಲದಲ್ಲಿ ಕರ್ತವ್ಯ ನಿರ್ವಹಿಸಲು ಚಂದ್ರ ಅವರಿಗೆ ನಿರ್ದೇಶನ ನೀಡಲಾಗಿದೆ. ಸಿ.ಟಿ. ಕುಟ್ಟಪ್ಪ ಇತರರು ನೀಡಿದ ದೂರಿನನ್ವಯ ವೀರಾಜಪೇಟೆ ತಹಶೀಲ್ದಾರ್ ಕಚೇರಿಗೆ ಹಾಜರಾಗಿ ಚಂದ್ರ ಅವರು ಸ್ಪಷ್ಟೀಕರಣವನ್ನು ನೀಡಿದ ನಂತರ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.

ಚಂದ್ರ ಅವರು ಶ್ರೀಮಂಗಲ ದಲ್ಲಿಯೂ ಸಾರ್ವಜನಿಕರಿಗೆ ಕಿರುಕುಳ ಆರಂಭಿಸಬಹುದು ಹಾಗೂ ಮತ್ತೆ ಕಿರುಗೂರು ವ್ಯಾಪ್ತಿಗೆ ವಾಪಾಸ್ಸು ಬರಲು ವಶೀಲಿ ಬೀರುತ್ತಿರುವದು ತಮ್ಮ ಗಮನಕ್ಕೆ ಬಂದಿದ್ದು, ಅಕ್ರಮ ಆಸ್ತಿ-ಪಾಸ್ತಿ ತನಿಖೆಯೊಂದಿಗೆ ಸೇವೆಯಿಂದ ವಜಾಗೊಳಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಕಾರ್ಯೋನ್ಮುಖರಾಗುವಂತೆ ಕುಟ್ಟಪ್ಪ ಹಾಗೂ ಇತರರು ಒತ್ತಾಯಿಸಿದ್ದಾರೆ.

- ಟಿ.ಎಲ್. ಶ್ರೀನಿವಾಸ್