ವೀರಾಜಪೇಟೆ, ಜೂ. 14: ದೇಶದ ಪ್ರತಿಯೊಬ್ಬ ಪ್ರಜೆಗೂ ಕಾನೂನಿನ ಅರಿವು ಅಗತ್ಯವಿ ರುವದರಿಂದ ಕಾನೂನು ಸೇವಾ ಯೋಜನೆ ಎಂಬ ಸಂಸ್ಥೆ ಸಾರ್ವಜನಿಕರಿಗೂ ಉಚಿತ ಕಾನೂನು ನೆರವು ನೀಡುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿüೀಶ ಡಿ.ಆರ್. ಜಯಪ್ರಕಾಶ್ ಹೇಳಿದರು.

ಇಲ್ಲಿಗೆ ಸಮೀಪದ ದೇವಣಗೇರಿ ವಿ.ಎಸ್.ಎಸ್.ಎನ್.ನ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವೀರಾಜಪೇಟೆ ವಕೀಲರ ಸಂಘದ ವತಿಯಿಂದ ಕಾನೂನು ಸಾಕ್ಷರತಾ ರಥದ ಮೂಲಕ ವಿಶೇಷ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಾದಿ ಪ್ರತಿವಾದಿಗಳ ಸಮ್ಮತಿ ಮೇರೆಗೆ ಲೋಕ ಅದಾಲತ್‍ನಲ್ಲಿ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥ ಮಾಡುವದರಿಂದ ನ್ಯಾಯಾ ಲಯದಲ್ಲ್ಲೂ ಕಾರ್ಯನಿರ್ವಹಣೆಯ ಒತ್ತಡ ಕಡಿಮೆಯಾಗಲಿದೆ. ಕಾನೂನಿಗೆ ಎಲ್ಲರೂ ಸಮಾನರು, ಇದರಲ್ಲಿ ಯಾವದೇ ಭಿನ್ನ ಭೇದವಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ದೇವಣಗೇರಿ ಪ್ಲಾಂಟರ್ ಕ್ಲಬ್ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿದ್ದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಲು ಸಾಧ್ಯತೆ ಇದೆ. ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಮಾತ್ರ ಸ್ವಚ್ಛ ಭಾರತ ಆಗಲು ಸಾಧ್ಯ ಎಂದರು.

ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎಂ. ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ಬಿ.ಸಿ. ಸುಬ್ಬಯ್ಯ ‘ಪರಿಸರ ಮತ್ತು ಕಾನೂನು’ ಎಂಬ ವಿಷೆಯದ ಬಗ್ಗೆ ಮಾತನಾಡಿದರು. ಅತಿಥಿಗಳಾಗಿ ದೇವಣಗೇರಿ ಪ್ಲಾಂಟರ್ಸ್ ಕ್ಲಬ್‍ನ ಕಾನೂನು ಸಲಹೆಗಾರ ಪುಗ್ಗೇರ ರಂಜಿ ದೇವಯ್ಯ, ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ಸರ್ಕಾರಿ ಅಭಿಯೋಜಕ ನಾಗರಾಜ್ ಆಚಾರ್ಯ, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರೀರ ಟಿ.ನಾಣಯ್ಯ, ಬಿ.ಸಿ. ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಆರ್. ಲೋಕೇಶ್ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷ ವಿ.ಜಿ. ರಾಕೇಶ್ ಸ್ವಾಗತಿಸಿ, ವಂದಿಸಿದರು.