ಸೋಮವಾರಪೇಟೆ/ಶನಿವಾರಸಂತೆ, ಅ. 10: ಎಲ್ಲೆಡೆ ಆಯುಧ ಪೂಜೋತ್ಸವದ ಸಂಭ್ರಮ ಮನೆಮಾಡಿದ್ದರೆ, ಮಧ್ಯೆ ಶನಿವಾರಸಂತೆ ಯಲ್ಲಿ ಪಿಸ್ತೂಲ್ ಘರ್ಜಿಸಿದ್ದು, ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯ ಹತ್ಯೆ ನಡೆದಿದೆ.

ವಾಹನವನ್ನು ಸರ್ವಿಸ್ ಮಾಡಿಸುವ ವಿಚಾರದಲ್ಲಿ ಏರ್ಪಟ್ಟ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸರ್ವಿಸ್ ಸ್ಟೇಷನ್‍ನ ಮಾಲೀಕ ತನ್ನ ಬಳಿಯಿದ್ದ ಪಿಸ್ತೂಲ್‍ನಿಂದ ಗ್ರಾಹಕನ ಮೇಲೆ ಗುಂಡಿನ ಧಾಳಿ ನಡೆಸಿದ್ದಾನೆ.

ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಗಾಯಾಳು ಕೊನೆಯುಸಿರೆಳೆದಿದ್ದು, ಉದ್ರಿಕ್ತ ಮಂದಿ ಮನೆ, ಸರ್ವಿಸ್ ಸ್ಟೇಷನ್ ಸೇರಿದಂತೆ ವಾಹನಗಳಿಗೆ ಬೆಂಕಿಯಿಟ್ಟು ಆಕ್ರೋಶ ಹೊರಹಾಕಿದ್ದಾರೆ. ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ನಿವಾಸಿ ಶೇಖರ್ (45) ಎಂಬವರೇ ಗುಂಡಿನ ಧಾಳಿಗೆ ಇಹಲೋಕ ತ್ಯಜಿಸಿದವರಾಗಿದ್ದು, ಇವರನ್ನು ಹತ್ಯೆಗೈದ ಆರೋಪಿ, ಬೈಪಾಸ್ ರಸ್ತೆಯಲ್ಲಿ ಸರ್ವಿಸ್ ಸ್ಟೇಷನ್ ನಡೆಸುತ್ತಿರುವ ಅಬ್ದುಲ್ ರಬ್ಬು ಶನಿವಾರಸಂತೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಪೂರ್ವಾಹ್ನ 11.30 ರಿಂದ ಸಂಜೆ 4.30ರ ವರೆಗೂ ಉದ್ವಿಗ್ನಗೊಂಡಿದ್ದ ಶನಿವಾರಸಂತೆ ನಗರ ನಂತರ ಸಹಜ ಸ್ಥಿತಿಗೆ ಮರಳಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ವಿವರ: ಶನಿವಾರಸಂತೆಯ ಗುಂಡೂರಾವ್ ಬಡಾವಣೆಯ ನಿವಾಸಿ ಶೇಖರ್ ಅವರು ಇಂದು ಬೆಳಿಗ್ಗೆ ತಮ್ಮ ವಾಹನವನ್ನು ಸರ್ವಿಸ್ ಮಾಡಿಸಲೆಂದು ಸ್ನೇಹಿತರೊಂದಿಗೆ ಅಬ್ದುಲ್ ರಬ್ಬು ಅವರ ಸರ್ವಿಸ್ ಸ್ಟೇಷನ್‍ಗೆ ತೆರಳಿದ್ದರು. ಈ ಸಂದರ್ಭ ಮೊದಲು ಸರ್ವಿಸ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದ್ದು, ಶೇಖರ್ ಸೇರಿದಂತೆ ಜೊತೆಗಾರರು ಹಾಗೂ ಅಬ್ದುಲ್ ರಬ್ಬು ಅವರುಗಳ ನಡುವೆ ತಳ್ಳಾಟ ನೂಕಾಟ ನಡೆದಿದೆ.