ಅಮ್ಮತ್ತಿ, ಜೂ. 10 : ದೇವಟ್ ಪರಂಬು ಎಂಬವದು ಟಿಪ್ಪುವಿನ ಮೋಸದ ಕೃತ್ಯದ ವಿರುದ್ಧ ನಿರಾಯುಧರಾಗಿ ಹೋರಾಡಿದ ಸಾವಿರಾರು ವೀರರು ಹುತಾತ್ಮರಾದ ಸ್ಥಳ. ಇದು ಕೊಡವರ ಪವಿತ್ರ ನೆಲೆ ಎಂಬದನ್ನು ನಾವು ಪೂರ್ವಜರಿಂದ ಮತ್ತು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಇದರ ಬಗ್ಗೆ ಕಥೆಯ ರೂಪದಲ್ಲಿ ಕೊಡಗಿನ ಪಟ್ಟೋಲೆ ಪಳಮೆಯಲ್ಲಿ ಉಲ್ಲೇಖವಿದೆ ಎಂದು ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಮೂಕೊಂಡ ಬೋಸ್ ದೇವಯ್ಯ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೇಶದ ರಕ್ಷಣೆಗಾಗಿ ಪ್ರಾಣತೆತ್ತಿರುವ ವೀರರ ಭೂಮಿ ಕೊಡಗು. ದೇವಟ್ ಪರಂಬು ಕೊಡವರ ಶ್ರದ್ಧಾ ಕೇಂದ್ರವೂ ಹೌದು. ಟಿಪ್ಪು ಕೊಡವರನ್ನು ಔತಣಕೂಟಕ್ಕೆಂದು ಆಮಂತ್ರಿಸಿ ನಂಬಿಕೆ ದ್ರೋಹ ಬಗೆದು ಕ್ರೂರವಾಗಿ ಎಲ್ಲರನ್ನೂ ಹತ್ಯೆ ಮಾಡಲಾದ ಇಂತಹ ಸ್ಥಳದಲ್ಲಿ ಸ್ಥಂಭವನ್ನು ನಿರ್ಮಿಸಿ ನಾಡಿಗಾಗಿ ನೆತ್ತರು ಹರಿಸಿ ಪ್ರಾಣತೆತ್ತ ನಮ್ಮ ಪೂರ್ವಿಕರಿಗೆ ಭಕ್ತಿ ಭಾವದಿಂದ ನಮನ ಸಲ್ಲಿಸುತ್ತಿರುವದು ಹಲವು ವರ್ಷಗಳಿಂದ ನಡೆಯುತ್ತಿದೆ.

ಆದರೆ ಕೆಲವು ದಿನಗಳ ಹಿಂದೆ ಕೊಡವರ ಏಳಿಗೆಯನ್ನು ಸಹಿಸದ ಕೆಲವು ಸ್ಥಾಪಿತ ಹಿತಾಸಕ್ತಿಗಳು ದೇವಟ್ ಪರಂಬುವಿನಲ್ಲಿ ಸ್ಥಾಪಿಸಿದ ಸ್ಥಂಭವನ್ನು ಜೆ.ಸಿ.ಬಿ. ಯಂತ್ರ ಬಳಸಿ ನಾಶ ಪಡಿಸಿರುವದನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ ಹಾಗೂ ದುಷ್ಕøತ್ಯವೆಸಗಿದ ಕಿಡಿಗೇಡಿಗಳನ್ನು ಬಂಧಿಸಿ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೊಡಗಿನಲ್ಲಿ ಎಲ್ಲರೂ ಅನ್ಯೋನ್ಯತೆಯಿಂದ, ಸಹೋದರತೆಯಿಂದ ಬಾಳುತ್ತಿದ್ದು, ಜಾತಿ ವ್ಯವಸ್ಥೆಯನ್ನು ಮೀರಿದ ಸ್ನೇಹ ಬಾಳ್ವೆ ನಮ್ಮಲ್ಲಿ ರಕ್ತಗತವಾಗಿದೆ. ಕೆಲವು ಕಾಣದ ಕೈಗಳಿಂದಾಗಿ ಇದು ವಿವಾದವಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲಾ ಸಮಸ್ಯೆಗಳು ಕೆಲವು ಸಂಧಾನ ಹಾಗೂ ಮಾತುಕತೆಯ ಮೂಲಕ ಬಗೆಹರಿಸಲು ಸಾಧ್ಯವಿದ್ದು, ಶೀಘ್ರದಲ್ಲೇ ಈ ವಿವಾದಗಳಿಗೆ ತೆರೆ ಎಳೆಯಲು ಪ್ರಯತ್ನ ಮಾಡಬೇಕು. ಇದು ಕೊಡವರಿಗೆ ಆದ ನೋವು ಮತ್ತು ಅಪಮಾನ ಎಂದು ತಿಳಿಸಿದ್ದಾರೆ.

ಕೊಡಗಿನ ಮೂಲ ನಿವಾಸಿಗಳಲ್ಲದವರಿಗೆ ಕೊಡವರು ಅನುಭವಿಸುತ್ತಿರುವ ನರಕಯಾತನೆ ಮತ್ತು ಆಚಾರ - ವಿಚಾರ ತಿಳಿಯಲು ಕಷ್ಟ ಸಾಧ್ಯ. ದೇವಟ್ ಪರಂಬು ರೆವಿನ್ಯೂ ದಾಖಲೆಯಲ್ಲಿ ಇಲ್ಲದಿದ್ದರೂ ಪರವಾಗಿಲ್ಲ. ಕೊಡಗಿನ ಅದೆಷ್ಟೋ ಪ್ರದೇಶಗಳು ವ್ಯಾವಹಾರಿಕವಾಗಿ ಚಾಲ್ತಿಯಲ್ಲಿದೆ. ಅದು ಎಷ್ಟೋ ದೇವಾಲಯಗಳು ಮೀಸಲು ಅರಣ್ಯದ ಮಧ್ಯದಲ್ಲಿ ಇದೆ. ಆದರೆ ಕೊಡವರು ಭೂಮಿಯನ್ನು ಒತ್ತುವರಿ ಮಾಡಿಲ್ಲ, ಮಾಡುವದು ಇಲ್ಲ. ಬದಲಿಗೆ ಅದರ ರಕ್ಷಣೆ ಮಾಡುತ್ತೇವೆ, ದೇವಟ್ ಪರಂಬು ನಮ್ಮ ಜನಾಂಗದ ಶ್ರದ್ಧಾ ಕೇಂದ್ರ. ಎಂದಿದ್ದಾರೆ.

ಕೊಡವರು ಯಾವದೇ ಜಾತಿ, ಧರ್ಮ ವಿರೋಧಿಗಳಲ್ಲ, ಯಾವ ಸಮುದಾಯದವರ ಸಂಸ್ಕøತಿಯನ್ನು ಅಪಹರಣ ಮಾಡಿಲ್ಲ. ಕೊಡವರು ತಮ್ಮದೇ ಪ್ರತಿಭೆಯಿಂದ ವಿಶ್ವವಿಖ್ಯಾತರಾಗಿದ್ದಾರೆ.

ಸಿ.ಎನ್.ಸಿ. ಸಂಘಟನೆಯ ನಾಯಕ ನಾಚಪ್ಪ ಕಳೆದ 30 ವರ್ಷಗಳಿಂದ ಕೊಡವರ ಏಳಿಗೆಗಾಗಿ ಹಲವಾರು ಬೇಡಿಕೆಗಳನ್ನು ಸರಕಾರ ಹಾಗೂ ವಿಶ್ವಸಂಸ್ಥೆಯ ಮುಂದೆ ಇಟ್ಟು ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಇಂತಹ ಬೇಡಿಕೆಗಳು ಕೊಡವ ಜನಾಂಗಕ್ಕೆ ಉಪಯುಕ್ತ ಆಗಿರುವದರಿಂದ ಇವರ ಕಾರ್ಯಕ್ರಮ ಹಾಗೂ ನಾಯಕತ್ವವನ್ನು ಒಪ್ಪಿಕೊಳ್ಳುವ ಮೂಲಕ ಅವರ ಸಾಮಾಜಿಕ ಕಾರ್ಯಕ್ರಮವನ್ನು ಬೆಂಬಲಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ.

ಅಮ್ಮತ್ತಿ ಕೊಡವ ಸಮಾಜದ ಮುಂದಾಳತ್ವದಲ್ಲಿ ಭಾಗಮಂಡಲದಲ್ಲಿ ಎಲ್ಲಾ ಕೊಡವ ಸಮಾಜಗಳು ಮತ್ತು ಸಂಘಟನೆಗಳು, ಏಕೀಕರಣ ರಂಗ ಒಂದು ಗೂಡಿ ಮಾನವ ಸರಪಳಿ ಮಾಡಿ ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಕೆಲವರು ವ್ಯಾಪಾರಕ್ಕೆಂದು ಬಂದು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ವ್ಯಾಪಾರಸ್ಥರ ಅಂಗಡಿ ಮುಂಗಟ್ಟುಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಿ ಅವರ ದಿನನಿತ್ಯದ ಸಂಪಾದನೆಗೆ ತೊಂದರೆ ಮಾಡಿದ್ದಾರೆ. ನಮ್ಮ ಕೊಡಗಿನಲ್ಲಿ ಯಾರನ್ನೂ ಉಪವಾಸ ಬೀಳಿಸುವ ಸಂಸ್ಕøತಿ ಇಲ್ಲ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಇನ್ನೂ ಕೆಲವರು ಕೊಡವರಿಗೆ ವ್ಯತಿರಿಕ್ತವಾಗಿ ಸೌಹಾರ್ದ ವೇದಿಕೆ ಮಾಡಿಕೊಂಡಿದ್ದಾರೆ. ಕೊಡವ ಜನಾಂಗ ಹೊರಗಡೆಯಿಂದ ಬಂದ ಎಲ್ಲಾ ವಲಸಿಗರಿಗೆ ಇಲ್ಲಿ ಬೆಳೆಯಲು ಅವಕಾಶ ಕೊಟ್ಟಿದ್ದಾರೆ. ಆದರೆ ಅವರುಗಳು ವಿರೋಧವಾಗಿ ತಿರುಗಿ ಬೀಳುವದು ಸರಿಯಾದ ರೀತಿಯಲ್ಲ. ಕೊಡಗು ಮತ್ತು ಸ್ಮಾರಕದ ಉಳಿವಿಗೆ ಎಲ್ಲರೂ ಸಹಕಾರ ನೀಡಬೇಕು.

ಚಳುವಳಿ ಮಾಡುವದು, ಬೆದರಿಕೆ ಒಡ್ಡುವದು ಇವುಗಳನ್ನೆಲ್ಲ ಮಾಡದೆ ಕೊಡವರನ್ನು ಎತ್ತಿ ಕಟ್ಟದೆ ಎಲ್ಲರ ಉಳಿವಿಗೆ ಸಹಕರಿಸಬೇಕು. ಹಾಗಿದ್ದಲ್ಲಿ ನಮ್ಮ ಸಂಸ್ಕøತಿ ಉಳಿಯಲು ಸಾಧ್ಯ. ದೇವಟ್ ಪರಂಬುವಿನಲ್ಲಿ ಮತ್ತೆ ಸ್ಮಾರಕ ನಿರ್ಮಿಸಲು ಸರಕಾರ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡು ಕೊಡವ ಜನಾಂಗಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕಾಗಿದೆ. ಕೊಡವರಿಗೆ ನ್ಯಾಯ ಒದಗಿಸುವಂತೆ ಮೂಕೋಂಡ ಬೋಸ್ ದೇವಯ್ಯ ಆಗ್ರಹಿಸಿದ್ದಾರೆ.

- ವರದಿ: ಈಶಾನ್ವಿ