ಮಡಿಕೇರಿ, ಜೂ. 8: ಕನ್ನಡನಾಡಿನಲ್ಲಿರುವ ಎಲ್ಲಾ ಭಾಷೆಯನ್ನು ಪ್ರೀತಿಸಿ ಆದರೆ, ಮೊದಲನೇ ಆದ್ಯತೆ ಕನ್ನಡ ಭಾಷೆಗೆ ನೀಡುವಂತೆ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಅಭಿಪ್ರಾಯಪಟ್ಟಿದ್ದಾರೆ.

ಡಿ. ದೇವರಾಜು ಅರಸು ಭವನದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಆಶ್ರಯದಲ್ಲಿ 2015-16ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 120ಕ್ಕೂ ಅಧಿಕ ಹಾಗೂ ಪಿಯುಸಿಯಲ್ಲಿ 100ಕ್ಕೆ 95ಕ್ಕೂ ಅಧಿಕ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕನ್ನಡ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ಅಗತ್ಯವಿದೆ. ಭಾಷಾಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳುವ ಮೂಲಕ ಇತರರಿಗೂ ಕನ್ನಡವನ್ನು ಕಲಿಸಿಕೊಡಬೇಕಾಗಿದೆ. ಜಿಲ್ಲೆಗೆ ಆಗಮಿಸುವ ಅಧಿಕಾರಿಗಳು ಕನ್ನಡದ ಬಗ್ಗೆ ತಾತ್ಸಾರ ಮನೋಭಾವನೆ ತೋರದೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡಿಗರು ಎಲ್ಲಾ ಭಾಷೆಯನ್ನು ಪ್ರೀತಿಸುತ್ತಾರೆ. ಅದೇ ರೀತಿಯಲ್ಲಿ ಇತರ ಭಾಷಿಕರು ಕನ್ನಡ ಭಾಷೆಯನ್ನು ಪ್ರೀತಿಸಿ ಬೆಳೆಸಬೇಕೆಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಆರ್. ಬಸವರಾಜು ಮಾತನಾಡಿ, ಆಧುನಿಕತೆ ಬೆಳೆದಂತೆ ಪಠ್ಯಕ್ರಮದಲ್ಲಿ ಕನ್ನಡ ಭಾಷೆಯನ್ನು ಸರಳಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ರಾಜ್ಯದಲ್ಲಿ ಹಲವು ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಎಲ್ಲಾ ಭಾಷೆಗಳನ್ನು ಇಲ್ಲಿನ ಕನ್ನಡಿಗರು ಪ್ರೀತಿಸುತ್ತಾರೆ. ಆದರೆ ಹೊರ ರಾಜ್ಯಗಳಲ್ಲಿ ಅಲ್ಲಿನ ಭಾಷೆಗೆ ಮಾತ್ರ ಪ್ರಾದಾನ್ಯತೆಯಿದೆ. ಕನ್ನಡ ಪಾರಂಪರಿಕ ಭಾಷೆಯಾಗಿದ್ದು, ಕನ್ನಡವನ್ನು ಪ್ರೀತಿಸಬೇಕೆಂದು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ವಿದ್ಯಾರ್ಥಿಗಳು ಮುಂದೆ ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು. ಸಮಾಜಮುಖಿ ಕೆಲಸ ಮಾಡಿ ಸಮಾಜಕ್ಕೆ ಹೊರೆಯಾಗದಿರಿ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಸಾಪ ಗೌರವ ಕಾರ್ಯದರ್ಶಿ ಡಾ. ಸುಭಾಷ್ ನಾಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ 180 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ನಿಕಟಪೂರ್ವ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ವೀರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ಮಧೋಶ್ ಪೂವಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಹೆಚ್. ಜೆ. ಜವರಪ್ಪ, ಲಯನ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ನವೀನ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಸ್ವಾಮಿ, ಕೆ. ನಿಡುಗಣೆ ಗ್ರಾ.ಪಂ. ಸದಸ್ಯ ಕೆ.ಕೆ. ಅಯ್ಯಪ್ಪ ಹಾಗೂ ಇನ್ನಿತರರು ಇದ್ದರು.

ಕಸಾಪ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ಪದಾಧಿಕಾರಿ ಗಳಾದ ಕೆ.ಸಿ. ದಯಾನಂದ, ನಾಗರಾಜ್ ಶೆಟ್ಟಿ ಹಾಗೂ ಇನ್ನಿತರರು ಕಾರ್ಯಕ್ರಮ ನಿರ್ವಹಿಸಿದರು.