ಕೂಡಿಗೆ, ಅ. 28: ಕೂಡಿಗೆ ಕೃಷಿ ಕ್ಷೇತ್ರದ ಆವರಣದಲ್ಲಿರುವ ರೇಷ್ಮೆ ಕೃಷಿ ಕ್ಷೇತ್ರಕ್ಕೆ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕ ರವಿ ಭೇಟಿ ನೀಡಿ, ಹಿಪ್ಪೆನೇರಳೆ ಗಿಡ ಹಾಗೂ ರೇಷ್ಮೆ ಬಿತ್ತನೆ ಕೋಟೆಗಳನ್ನು ಪರಿಶೀಲಿಸಿದರು.

ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೂಡಿಗೆಯ ರೇಷ್ಮೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಬಗ್ಗೆ ವಿವಿಧ ಮಾಹಿತಿಗಳನ್ನು ಕಲೆ ಹಾಕಿ ರೇಷ್ಮೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಹಾಗೂ ರೇಷ್ಮೆ ಬೆಳೆಗಾರರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಿ ರೇಷ್ಮೆ ಬೆಳೆಯತ್ತ ರೈತರು ತೊಡಗಿಸಿಕೊಳ್ಳಲು ಅಧಿಕಾರಿಗಳು ಮುಂದಾಗುವಂತೆ ಸಲಹೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚು ರೈತರು ರೇಷ್ಮೆ ಬೆಳೆಯತ್ತ ಒಲವು ತೋರುತ್ತಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಲು ರೇಷ್ಮೆ ಬೆಳೆಯು ಉತ್ತಮವಾಗಿದೆ. ಮಹಿಳೆಯರು ಸಹ ಬಿಡುವಿನ ವೇಳೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ರೇಷ್ಮೆ ಗೂಡನ್ನು ಬೆಳೆದು ಬದುಕನ್ನು ಹಸನುಗೊಳಿಸಲು ಸಹಕಾರಿಯಾಗುತ್ತದೆ. ಅಲ್ಲದೆ, ಇಲಾಖೆಯ ವತಿಯಿಂದ ರೈತರಿಗೆ ರೇಷ್ಮೆ ಮನೆ, ಹಿಪ್ಪುನೇರಳೆ ಗಿಡ, ಅದಕ್ಕೆ ಬೇಕಾಗುವಂತಹ ವಿವಿಧ ಸಾಮಗ್ರಿಗಳಿಗೆ ಸಹಾಯ ಧನ ನೀಡ ಲಾಗುವದು. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭ ರೇಷ್ಮೆ ಕೃಷಿ ಕ್ಷೇತ್ರದ ಸಹಾಯಕ ನಿರ್ದೇಶಕ ಸಿದ್ಧರಾಜು, ನಾಗಾರಾಜು, ಕೂಡಿಗೆ ರೇಷ್ಮೆ ಕ್ಷೇತ್ರದ ಅಧಿಕಾರಿ ಮಹೇಶ್, ಭಾಸ್ಕರ್, ಸೋಮಯ್ಯ ಇದ್ದರು.