ಮಡಿಕೇರಿ, ಜೂ. 14: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಂಕ ತರುವಂತೆ ವರ್ತಿಸುತ್ತಿರುವ ಅನೋಂದಾಯಿತ ಹೋಂ ಸ್ಟೇಗಳ ವಿರುದ್ಧ ಕ್ರಮಕೈಗೊಳ್ಳುವದು ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗುವ ಹೋಂ ಸ್ಟೇಗಳಿಗೆ ಬೀಗ ಜಡಿಯಲು ಇಲಾಖೆ ನಿರ್ಧರಿಸಿದೆ ಎಂದು ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದರು.

ಅವರು ಇಂದು ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ ಈ ತೀರ್ಮಾನ ತಿಳಿಸಿದರು. ಜಿಲ್ಲೆಯ ಸಂಸ್ಕøತಿ, ಆತಿಥ್ಯದ ಪರಿಚಯ ಆಗುವ ಬದಲು ಪ್ರವಾಸಿಗರಿಗೆ ನಿಯಮಬಾಹಿರ ಹೋಂ ಸ್ಟೇಗಳಿಂದ ಆಘಾತವಾಗುತ್ತಿದೆ ಎಂದರು.

ನಗರದಲ್ಲಿ ದಲ್ಲಾಳಿಗಳ ಹಾವಳಿಯ ಕುರಿತು ಕೇಳಿ ಬಂದಿದ್ದು, ಅಂತವರನ್ನು ತಹಬದಿಗೆ ತರುವದಾಗಿ ರಾಜೇಂದ್ರ ಪ್ರಸಾದ್ ಹೇಳಿದರು. ಜಿಲ್ಲೆಯಲ್ಲಿ ನೂರಾರು ನಿಯಮಬಾಹಿರ ಹೋಂ ಸ್ಟೇಗಳು ತಲೆ ಎತ್ತಿದ್ದು, ಅವುಗಳ ಪಟ್ಟಿ ತಯಾರಿಸಲು ಆಯಾಯ ಠಾಣೆಗಳಿಗೆ ಸೂಚನೆ ನೀಡಿರುವದಾಗಿ ಎಸ್ಪಿ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಹಾಗೂ ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೋಂ ಸ್ಟೇ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಒಟ್ಟು 404 ನೋಂದಾಯಿತ ಹೋಂ ಸ್ಟೇಗಳು ಕಾರ್ಯನಿರ್ವಹಿಸುತ್ತಿದ್ದು, ಸಾವಿರಾರು ಹೋಂ ಸ್ಟೇಗಳು ಪ್ರವಾಸೋದ್ಯಮ ಇಲಾಖೆಯ ನೋಂದಣಿ ಇಲ್ಲದೆ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುತ್ತವೆ. ಅನಧಿಕೃತವಾಗಿ ನಡೆಸಲ್ಪಡುವ ಹೋಂ ಸ್ಟೇಗಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ಸಾಕಷ್ಟು ಕಾಲಾವಕಾಶ ನೀಡಿದ್ದರೂ, ಹೊಸದಾಗಿ ಹೋಂ ಸ್ಟೇ ನೋಂದಣಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಕಡಿಮೆ ಇರುತ್ತದೆ. ಅನಧಿಕೃತವಾಗಿ ಹೋಂ ಸ್ಟೇ ನಡೆಸುವದು ಕಾನೂನು ಉಲ್ಲಂಘನೆಯಾಗುತ್ತದೆ. ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವದು ಎಂದರು.

ಸಭೆಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಮದನ್ ಸೋಮಣ್ಣ, ಸಮಿತಿ ಸದಸ್ಯರುಗಳಾದ ಕೆ.ಎಂ. ಕರುಂಬಯ್ಯ, ಬಿ.ಜಿ. ಅನಂತ ಶಯನ, ನವೀನ್ ಅಂಬೆಕಲ್, ಶಶಿ ಮೊಣ್ಣಪ್ಪ, ಅನಿತಾ ಸೋಮಣ್ಣ, ವಿನಿತಾ ಕರುಂಬಯ್ಯ ಹಾಜರಿದ್ದರು.