ಸಿದ್ದಾಪುರ, ಅ. 30: ತಾಲೂಕು ಬರಪಿಡಿತ ಪ್ರದೇಶವಾಗಿ ಘೋಷಣೆಯಾದರೂ ಅಭಿವೃದ್ಧಿ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ನಡೆಯಿತು.

ಮಾಲ್ದಾರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಕಷ್ಟು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಈ ಸಮಸ್ಯೆಯನ್ನು ಬಗೆ ಹರಿಸುವಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿದ್ದಾರೆ.

ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ರಾಣಿ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಅಂಕಯ್ಯ ಅವರ ಸಮ್ಮುಖದಲ್ಲಿ ಗ್ರಾ.ಪಂ.ನಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ದೂರುಗಳ ಸುರಿಮಳೆ ವ್ಯಕ್ತವಾದವು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾಕಷ್ಟು ಗ್ರಾಮಗಳು ಮತ್ತು ಹಾಡಿಗಳಲ್ಲಿ ರಸ್ತೆ, ಮನೆ, ವಿದ್ಯುತ್ ದೀಪ, ಚರಂಡಿ, ತಡೆಗೊಡೆ, ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳನ್ನು ಗ್ರಾಮಸ್ಥರು ಬಿಚ್ಚಿಟ್ಟರು. ಈ ಬಗ್ಗೆ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.

ಜೋಸ್ ಕುರಿಯನ್ ಎಂಬವರು ದಾನದ ರೂಪದಲ್ಲಿ ನೀಡಿದ ಜಾಗದಲ್ಲಿ ಕಳೆದ ಹಲವು ವರ್ಷಗಳ ಹಿಂದೆಯೇ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ಆದರೇ ಗ್ರಾಮಗಳಿಗೆ ಕುಡಿಯುವ ನೀರಿನ ಭಾಗ್ಯ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿ ದ್ದಾರೆ ಎಂದು ಅರೋಪಿಸಿದರು. ಸ್ಥಳಕ್ಕೆ ಇಂಜಿನಿಯರ್ ಅವರನ್ನು ಕರೆಸಬೇಕೆಂದು ಪಟ್ಟು ಹಿಡಿದರು

ಈ ಭಾಗದ ಅರಣ್ಯ ವಾಸಿಗಳಿಗೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಮನೆ, ವಿದ್ಯುತ್‍ನ್ನು ಒದಗಿಸಿ ಕೊಡುವಂತೆ ಕಳೆದ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದರೂ ಇದುವರೆಗೂ ಮೂಲ ಸೌಲಭ್ಯ ದೊರಕದ ಆದಿವಾಸಿಗಳು ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹಾಡಿಯ ನೀವಾಸಿಗಳು ಗರಂ ಆದ ಘಟನೆಯೂ ಎದುರಾಯಿತು.

ಪಡಿತರ ಚೀಟಿ ವಿತರಣೆಯಲ್ಲಿ ಅಧಿಕಾರಿಗಳು ಗೊಂದಲವನ್ನು ಸೃಷ್ಟಿಸಿದ್ದು, ಕಡು ಬಡವರು ಪಡಿತರ ವ್ಯವಸ್ಥೆ ಪಡೆದುಕೊಳ್ಳಲು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಕೆಲವು ಗ್ರಾಮಗಳಲ್ಲಿ ಪಡಿತರ ಚೀಟಿಯಿಂದ ವಂಚಿತರಾಗಿದ್ದಾರೆ. ಆಹಾರ ಅಧಿಕಾರಿ ಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪ ಮಾಡಿದರು.

ಗ್ರಾಮದಲ್ಲಿ ಸರಿಯಾದ ರಸ್ತೆ ಸಂಪರ್ಕ ಇಲ್ಲ. ರಸ್ತೆಗಳು ಹದಗೆಟ್ಟು ಹೋಗಿದೆ. ವಿದ್ಯುತ್ ಸಂಪರ್ಕ ಇಲ್ಲ. ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಆಹಾರ ಪದಾರ್ಥ ವಿತರಣೆ ಮಾಡುತ್ತಿಲ್ಲ ಸೇರಿದಂತೆ ಹತ್ತಾರೂ ಸಮಸ್ಯೆಗಳನ್ನು ಸಾರ್ವಜನಿಕರು ಸಭೆಯಮುಂದಿಟ್ಟರು.

ಬಡವರಿಗೆ ನೀಡುವ ವಿವಿದ ಯೋಜನೆಗಳಿಂದ ಮನೆಗಳ ನಿರ್ಮಾಣದ ಕಾಮಗಾರಿಗಳ ಬಿಲ್ ಇನ್ನೂ ಪಾವತಿಯಾಗಿಲ್ಲ ಎಂದು ಫÀಲಾನುಭವಿಗಳು ದೂರಿಕೊಂಡರು

ಪಿಡಿಓ ರಾಜೇಶ್ ಮಾತನಾಡಿ, ಪಂಚಾಯತ್ ನಿಂದ ಈ ವ್ಯಾಪ್ತಿಗೆ ಬಿಡುಗಡೆಯಾದ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವದಾಗಿ ತಿಳಿಸಿದರು.

ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷ ರಾಜು, ಸದಸ್ಯರಾದ ಸತೀಶ್, ಕರುಂಬಯ್ಯ, ಸಜಿ ಥೋಮಸ್, ಉಮೇಶ್, ಮುತ್ತಪ್ಪ, ನಿಯಾಜ್, ಪದ್ಮಾ, ಫಾತಿಮಾ, ಇಂದಿರಾ, ಮಾಲತಿ, ಪವಿತ್ರ, ರುದ್ರಪ್ಪ, ಗ್ರಾಮಸ್ಥರಾದ ಮಿಟ್ಟು ನಂಜಪ್ಪ, ಜೋಸ್ ಕುರಿಯನ್, ಅಜ್ಜಿನಿಕಂಡ ರಾಜು ಅಪ್ಪಯ್ಯ, ವಿಜು, ರವಿ, ಬೋಪಣ್ಣ, ಶಾಜಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸಿ.ಎ ಹಂಸ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಧನ್ಯರತಿ, ಸೇರಿದಂತೆ ಮತ್ತಿತರರು ಹಾಜರಿದ್ದರು