ಮಡಿಕೇರಿ ನ.24 :ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ - ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ 30 ನೇ ವರ್ಷದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ತಾ. 30 ರಿಂದ ಡಿ. 5 ರವರೆಗೆ ನಡೆಯಲಿದೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅಶ್ವಿನಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ| ಪಿ.ಎಂ. ಕುಲಕರ್ಣಿ ಅವರು, ಆರು ದಿನಗಳ ಕಾಲ ನಡೆಯುವ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ರೋಟರಿ ಕ್ಲಬ್, ಬೆಂಗಳೂರು ದಕ್ಷಿಣ ವಿಭಾಗದ ರೋಟರಿ ಸಂಸ್ಥೆ, ದಿ ಕೂರ್ಗ್ ಫೌಂಡೇಶನ್, ಡ್ರಿಕುಂಗ್ ಚಾರಿಟೇಬಲ್ ಸೊಸೈಟಿ ಬೈಲುಕೊಪ್ಪ, ಮಡಿಕೇರಿ ಮತ್ತು ನಾಪೋಕ್ಲು ಲಯನ್ಸ್ ಕ್ಲಬ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಎ.ಎ. ಕಾರ್ಯಪ್ಪÀ, ಹಿಲ್‍ಡೇಲ್ ರೆಸಾರ್ಟ್ ಹಾಗೂ ಉದಾರ ದಾನಿಗಳ ಸಹಯೋಗ ದೊಂದಿಗೆ 30ನೇ ವರ್ಷದ ಶಿಬಿರ ನಡೆಯುತ್ತಿದೆ. ಅಶ್ವಿನಿ ಆಸ್ಪತ್ರೆಯ 40ನೇ ವಾರ್ಷಿಕೋತ್ಸವ ಪ್ರಯುಕ್ತ ಈ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಕಳೆದ 29 ವರ್ಷಗಳಿಂದ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ನೇತ್ರ ಶಸ್ತ್ರ ಚಿಕಿತ್ಸಕರಾದ ಹಾಸನದ ಬಿ.ಎನ್. ಶಿವಪ್ರಸಾದ್ ಹಾಗೂ ಬೆಂಗಳೂರಿನ ಡಾ| ಶ್ರೀಧರ್ ಮತ್ತು ತಂಡ ಈ ಬಾರಿ ಶಿಬಿರವನ್ನು ನಡೆಸಿ ಕೊಡಲಿದ್ದಾರೆ. ಶಿಬಿರದ ಉಸ್ತುವಾರಿಯನ್ನು ನೇತ್ರ ತಜ್ಞರುಗಳಾದ ಡಾ|ಎಂ.ಎ. ಸುಧಾಕರ್ ಹಾಗೂ

(ಮೊದಲ ಪುಟದಿಂದ) ಡಾ| ಪ್ರಶಾಂತ್ ವಹಿಸಲಿದ್ದಾರೆ. ಅರವಳಿಕೆ ವಿಭಾಗವನ್ನು ತಜ್ಞರಾದ ಡಾ| ಜನಾರ್ಧನ್ ಮತ್ತು ತಂಡ, ಸಾಮಾನ್ಯ ಪರೀಕ್ಷೆಯನ್ನು ಡಾ| ಅಜಿತ್ ನಡೆಸಿಕೊಡಲಿದ್ದು, ಶಸ್ತ್ರ ಚಿಕಿತ್ಸೆಗೆ ಬೇಕಾಗುವ ಉಪಕರಣಗಳನ್ನು ಜಿಲ್ಲಾ ಆಸ್ಪತ್ರೆ ಒದಗಿಸಲಿದೆಯೆಂದು ಡಾ| ಕುಲಕರ್ಣಿ ತಿಳಿಸಿದರು.

ಈ ಶಿಬಿರಕ್ಕೆ ವೈದ್ಯರು, ಸಹಾಯಕರು, ಸ್ವಯಂ ಸೇವಕರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಸುಮಾರು ತೊಂಭತ್ತು ಮಂದಿಯ ಸೇವೆ ಲಭ್ಯವಾಗಲಿದೆ. ಅತ್ಯಾಧುನಿಕ ರೀತಿಯಲ್ಲಿ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿ ಅಗತ್ಯವಿರುವವರಿಗೆ ಉಚಿತವಾಗಿ ಒಳ ಮಸೂರವನ್ನು ಅಳವಡಿಸಲಾಗುವದು ಅಲ್ಲದೆ ಫೇಕೋ ವಿಧಾನದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುವದೆಂದು ತಿಳಿಸಿದರು.

ಶಿಬಿರದ ಅಂಗವಾಗಿ ಸುಮಾರು 55 ಸ್ಥಳಗಳಲ್ಲಿ ತಾ. 30 ರಂದು ಮತ್ತು ಡಿ. 1 ರಂದು ಶಿಬಿರಾರ್ಥಿಗಳನ್ನು ಆಯ್ಕೆ ಮಾಡಲಾಗುವದು. ಜಿಲ್ಲೆಯಾದ್ಯಂತ ಮಾತ್ರವಲ್ಲದೆ ಅಕ್ಕಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರ ತಾಲೂಕಿನ ಆಯ್ದ ಹಳ್ಳಿಗಳಲ್ಲಿ ನೇತ್ರ ಪರೀಕ್ಷಾ ಶಿಬಿರ ನಡೆಸ ಲಾಗುವದು. ಅಗತ್ಯವಿರುವವರನ್ನು ಅಶ್ವಿನಿ ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗುವದೆಂದು ಅವರು ಹೇಳಿದರು.

ಡಿ.5 ರಂದು ಸಮಾರೋಪ ಸಮಾರಂಭದ ನಂತರ ಶಿಬಿರಾರ್ಥಿ ಗಳನ್ನು ಬೀಳ್ಕೊಡಲಾಗುವದು. ಶಿಬಿರಾರ್ಥಿಗಳಿಗೆ ಮತ್ತು ಸಹಾಯಕರಿಗೆ ಉಚಿತ ಊಟೋಪಚಾರಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಂಧತ್ವ ನಿವಾರಣೆಯು ಒಂದು ರಾಷ್ಟ್ರೀಯ ಕಾರ್ಯಕ್ರಮವೆಂದು ಕೇಂದ್ರ ಸರ್ಕಾರ ಘೋಷಿಸಿರುವ ಹಿನ್ನೆಲೆ ಈ ಶಿಬಿರಕ್ಕೆ ಆಹಾರ ಇಲಾಖೆಯ ಸಹಕಾರವೂ ದೊರಕುತ್ತಿದೆಯೆಂದು ಡಾ|ಕುಲಕರ್ಣಿ ಇದೇ ಸಂದರ್ಭ ತಿಳಿಸಿದರು. À ಒಂದು ತಿಂಗಳ ಬಳಿಕ ಪೂರಕ ಶಿಬಿರವನ್ನು ನಡೆಸುವ ಮೂಲಕ ಶಸ್ತ್ರ ಚಿಕಿತ್ಸೆಗೆ ಒಳಗಾದವರ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಶಿಬಿರ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಡಿ.2 ರಂದು ಉದ್ಘಾಟನೆಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಆಸ್ಪತ್ರೆಯ ಟ್ರಸ್ಟಿಗಳಾದ ಎಂ.ಸಿ. ಗೋಖಲೆ, ಸಂಪತ್ ಕುಮಾರ್ ಹಾಗೂ ಆರೋಗ್ಯ ಇಲಾಖೆಯ ಡಾ| ರವಿ ಕುಮಾರ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಪಾಲ್ಗೊಳ್ಳುವವರು ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ಎಂ.ಸಿ. ಗೋಖಲೆ 9448976393, ಡಾ| ಕುಲಕರ್ಣಿ 9448647202.