ಶನಿವಾರಸಂತೆ, ಜೂ. 14: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಎಲ್. ಧನಂಜಯ ಅವರ ಕಾರ್ಯವೈಖರಿಯನ್ನು ಆಕ್ಷೇಪಿಸಿ ಪಂಚಾಯಿತಿ ಅಧ್ಯಕ್ಷೆ ನಿರ್ಮಲ, ಉಪಾಧ್ಯಕ್ಷ ಅಹಮ್ಮದ್ ಹಾಗೂ ಸದಸ್ಯರು, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್ ನೇತೃತ್ವದಲ್ಲಿ ಗ್ರಾಮಸ್ಥರು ಪಂಚಾಯಿತಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಅಭಿವೃದ್ಧಿ ಅಧಿಕಾರಿಯವರ ಕೊಠಡಿಗೆ 10 ದಿನಗಳ ಹಿಂದೆಯೇ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರಿಂದ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿರುವದರಿಂದ ಬೀಗ ಜಡಿಯಲಾಗಿದೆ. ಈ ಬಗ್ಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲದಂತಾಗಿದೆ.

ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ಅಳವಡಿಸಿಕೊಳ್ಳಲು ಎನ್‍ಓಸಿಗೆ ಸತಾಯಿಸುತ್ತಿದ್ದು, ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಹಣ ಕೊಟ್ಟಲ್ಲಿ ನಿಯಮಗಳನ್ನು ಮೀರಿ ಕೆಲಸಗಳನ್ನು ಮಾಡಿಕೊಡುತ್ತಾರೆ. ಬೀರುವನಲ್ಲಿದ ಕಡತಗಳು ನಾಪತ್ತೆಯಾಗಿದೆ. ಅಟೆಂಡರ್ ಹುದ್ದೆ ಖಾಯಂ ಮಾಡಿಸಲು ಹಣ ಪಡೆದಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳುವದಿಲ್ಲ.

ಲೈಸನ್ಸ್ ಪಡೆಯದೆ ಮನೆ ಕಟ್ಟಿ, ಅಕ್ರಮವಾಗಿ ಕುಡಿಯುವ ನೀರಿನ ಸಂಪರ್ಕ ಮಾಡಿಕೊಂಡವರ ಪಟ್ಟಿ ಮಾಡಿ, ನೋಟೀಸ್ ಜಾರಿ ಮಾಡುವಂತೆ ಸಾಮಾನ್ಯ ಸಭೆಯಲ್ಲಿ ಸೂಚನೆ ನೀಡಿದ್ದರೂ, ಇಲ್ಲಿಯವರೆಗೆ ಮಾಡಿಲ್ಲ. ಇದರಿಂದ ಪಂಚಾಯಿತಿಗೆ ರೂ. 1 ಲಕ್ಷ ನಷ್ಟ ಉಂಟಾಗಿದೆ. ಅದಲ್ಲದೆ ರೂ. 10 ಲಕ್ಷದಷ್ಟು ಕಂದಾಯ ಬಾಕಿ ಇದ್ದು, ವಸೂಲಾತಿಗೆ ಕ್ರಮಕೈಗೊಂಡಿಲ್ಲ.

ಅಕ್ಟೋಬರ್‍ನಲ್ಲಿ ಬಸವ ಯೋಜನೆಯಡಿ ಫಲಾನುಭವಿಗಳಿಗೆ ಬಂದ ಮನೆಗಳು, ಅಧಿಕಾರಿಯ ನಿರ್ಲಕ್ಷ್ಯದಿಂದ ವಾಪಾಸು ಹೋಗಿರುತ್ತದೆ. ಇಂತಹ ಅಭಿವೃದ್ಧಿ ಅಧಿಕಾರಿಯನ್ನು ಬದಲಾವಣೆ ಮಾಡಿ ಬೇರೆ ಅಧಿಕಾರಿಗಳನ್ನು ನಿಯೋಜಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸದಸ್ಯರುಗಳಾದ ಬಿ.ಕೆ. ದಿನೇಶ್, ಕೇಶವ, ಷಣ್ಮುಖಯ್ಯ, ಎಸ್.ಎಂ. ರೇಣುಕಾ, ಸಾವಿತ್ರಿ, ಹೇಮವತಿ, ಗೌರಮ್ಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.