ಮಡಿಕೇರಿ, ಜ. 1: ದಿಡ್ಡಳ್ಳಿ ಗಿರಿಜನರ ಪರ ಹೋರಾಟ ಸಮಿತಿ ಪರವಾಗಿ ಸಂಚಾಲಕ ಡಿ.ಎಸ್. ನಿರ್ವಾಣಪ್ಪ ಈ ಕೆಳಗಿನ ಹೇಳಿಕೆಯಿತ್ತಿದ್ದಾರೆ.ದಿಡ್ಡಳ್ಳಿಯ ಸಂತ್ರಸ್ತ ಆದಿವಾಸಿ ಗಳನ್ನು ಕುರಿತು ಹೊರಗಿನವರು, ನುಸುಳುಕೋರರು, ನಕ್ಸಲ್ ಚಟುವಟಿಕೆಯನ್ನು ಬೆಂಬಲಿಸುತ್ತಿರು ವವರ ಮುಂದಾಗಿ ಮಾತಾಡಿರುವ ಕೊಡಗು ಜಿಲ್ಲಾ ಉಸ್ತುವಾರಿ ಮಂತ್ರಿ ಎಂ.ಆರ್. ಸೀತಾರಾಂ ಹೇಳಿಕೆಯನ್ನು ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಸಮಿತಿ ಅತ್ಯಂತ ತೀಕ್ಷ್ಣ ಮಾತುಗಳಲ್ಲಿ ಖಂಡಿಸುತ್ತದೆ. ಹೀಗೆ ತಲೆಬುಡ ವಿಲ್ಲದ ಅಸಂಬದ್ಧ ಹೇಳಿಕೆ ಗಳನ್ನು ನೀಡುವ ಮೂಲಕ ದಿಡ್ಡಳ್ಳಿಯ ಆದಿವಾಸಿಗಳಿಗೆ ಅವರ ಹಕ್ಕನ್ನು ವಂಚಿಸಲು ಅಲ್ಲಿನ ಬೆಳೆಗಾರರು ಲಾಬಿ ನಡೆಸುತ್ತಿರುವದಕ್ಕೆ ಸೀತಾರಾಮ್ ಹೆಗಲು ನೀಡಿದ್ದಾರೆ.ಅವರು ಕೂಡಲೇ ಆದಿವಾಸಿಗಳ ಕ್ಷಮೆ ಕೇಳಬೇಕೆಂದು, ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಕೂಡಲೇ ಕೊಡಗು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸುತ್ತೇವೆ.

ಹಾಗೆಯೇ, ವಿನಾಕಾರಣ ದಿಡ್ಡಳ್ಳಿ ಮಾಲ್ದಾರೆ ವ್ಯಾಪ್ತಿಯಲ್ಲಿ ಹೇರಿರುವ ಸೆಕ್ಷನ್ 144ನ್ನು ಜಿಲ್ಲಾಡಳಿತವು ಕೂಡಲೇ ರದ್ದುಗೊಳಿಸದಿದ್ದಲ್ಲಿ ಸ್ವಾತಂತ್ರ್ಯ ಸೇನಾನಿ ಎಚ್.ಎಸ್. ದೊರೆಸ್ವಾಮಿಯವರು ಮತ್ತು ಕೊಡಗಿನ ಹಿರಿಯ ರಾಜಕಾರಣಿ ಎ.ಕೆ. ಸುಬ್ಬಯ್ಯನವರು ಸೂಚಿಸಿ ರುವಂತ ಅವರ ನೇತೃತ್ವದಲ್ಲಿ ದಿಡ್ಡಳ್ಳಿಯಲ್ಲಿ ನಿಷೇಧಾಜ್ಞೆಯನ್ನು ಮುರಿದು, ರಾಜ್ಯದಾದ್ಯಂತ ರಾಜ್ಯ ಸರ್ಕಾರದ ವಿರುದ್ಧವೇ ಚಳುವಳಿ ಯನ್ನು ತೀವ್ರಗೊಳಿಸಲಾಗುವದು.

ಆದ್ದರಿಂದ ಉಂಟಾಗ ಬಹುದಾದ ಎಲ್ಲಾ ಅನರ್ಥಗಳಿಗೆ ರಾಜ್ಯ ಸರ್ಕಾರವೇ ಹೊಣೆ ಯಾಗಿರುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸ ಬಯಸುತ್ತೇವೆ.

ದಿಡ್ಡಳ್ಳಿ ಆದಿವಾಸಿಗಳನ್ನು ಅಮಾನವೀಯವಾಗಿ ಸುರಿವ ಮಳೆ, ಕೊರೆವ ಚಳಿಯಲ್ಲಿ ಬೀದಿಪಾಲು ಮಾಡಿ 12 ದಿನ ಕಳೆದ ಮೇಲೆ, ಅದೂ ಭೂಮಿ-ವಸತಿ ಹೋರಾಟ ಸಮಿತಿಯ ಕೇಂದ್ರ ತಂಡವು ಹಾಡಿಗೆ ಹೋಗಿ ಆದಿವಾಸಿಗಳ ಜೊತೆ ನಿಂತು ಎಲ್ಲಾ ಸಂಘಟನೆಗಳನ್ನೂ ಜೊತೆಗೂಡಿಸಿ ಹೋರಾಟ ತೀವ್ರಗೊಳಿಸಿದ ನಂತರವಷ್ಟೇ ಡಿ. 19 ರಂದು ಹಾಡಿಗೆ ಭೇಟಿ ನೀಡಿದ ಸಚಿವ ಸೀತಾರಾಂ ಅಲ್ಲಿ ಸಭೆ ನಡೆಸಿ, ದಾಖಲೆಗಳನ್ನೆಲ್ಲ ಪರಿಶೀಲಿಸಿ, ಎಲ್ಲಾ ಆದಿವಾಸಿಗಳಿಗೂ ದಿಡ್ಡಳ್ಳಿಯಲ್ಲಿಯೇ ಪುನರ್ವಸತಿ ಕಲ್ಪಿಸಿ, ಎಲ್ಲರಿಗೂ ಪಡಿತರ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಇನ್ನಿತರ ಸಮಸ್ಯೆಗಳನ್ನು ಸಹ ಬಗೆಹರಿಸುವ ಭರವಸೆಯನ್ನೂ ನೀಡಿದ್ದರು.

ಆದರೆ ಅದ್ಯಾವದನ್ನೂ ಅಧಿಕಾರಿಗಳ ಬೆನ್ನುಹತ್ತಿ ಮಾಡಿಸುವ ಬದಲು, ಕೊಡಗಿನ ಲಾಬಿಯೊಂದಕ್ಕೆ ಮಣಿದು, ಅಧಿಕಾರಿಗಳ ಮಾತು ಕೇಳಿಕೊಂಡು ಸರಕಾರದ, ಮುಖ್ಯಮಂತ್ರಿಗಳ ಮತ್ತು ಇತರ ಮಂತ್ರಿಗಳ ದಾರಿ ತಪ್ಪಿಸುತ್ತಿದ್ದಾರೆ. ಪೊಲೀಸ್ ಐಜಿಪಿ ಬಿ.ಕೆ. ಸಿಂಗ್ ಅವರೇ ಸ್ವತಃ ಮಡಿಕೇರಿಗೆ ಭೇಟಿ ಕೊಟ್ಟು, ದಿಡ್ಡಳ್ಳಿ ಪ್ರದೇಶದಲ್ಲಿ ಯಾವದೇ ನಕ್ಸಲ್ ಚಟುವಟಿಕೆಯೂ ಇಲ್ಲ, ಅಂತಹ ಯಾವದೇ ಗುಪ್ತಚರ ಮಾಹಿತಿಯೂ ಬಂದಿಲ್ಲ ಎಂದು ಸ್ಪಷ್ಟವಾಗಿ ಸಾರಿ ಹೇಳಿದ ಮೇಲೂ ಈ ಸಚಿವರು ಗಿರಿಜನರ ವಿರುದ್ಧವಾಗಿ ವರ್ತಿಸುತ್ತಿರುವದು ಅಮಾಯಕರನ್ನು ತುಳಿಯುವದೇ ಇವರೆಲ್ಲರ ಹುನ್ನಾರವಾಗಿದೆ. ಜನತೆಯ ಪ್ರಜಾತಾಂತ್ರಿಕ ಹಕ್ಕಿನ ಮೇಲಿನ ಈ ಹಲ್ಲೆಯನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.

ಮಾನವೀಯತೆಯ ಲವಶೇಶವಾದರೂ ಉಳಿದಿದ್ದಲ್ಲಿ ಕೂಡಲೇ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡು ಆದಿವಾಸಿಗಳ ಬೇಷರತ್ ಕ್ಷಮೆ ಕೇಳಬೇಕು ಹಾಗೂ ಉಸ್ತುವಾರಿ ಸ್ಥಾನದಿಂದ ಹಿಂದೆ ಸರಿಯಬೇಕು ಎಂದು ಆದಿವಾಸಿಗಳ ನ್ಯಾಯೋಚಿತ ಬೇಡಿಕೆ ಈಡೇರಿಸಬೇಕು ಎಂದು ಸಮಿತಿಯ ಪರವಾಗಿ ನಿರ್ವಾಣಪ್ಪ ಒತ್ತಾಯಿಸಿದ್ದಾರೆ.