ಮಡಿಕೇರಿ, ಜೂ. 9: ಪೊಲೀಸ್ ಇಲಾಖೆಯಲ್ಲಿ ಡಿವೈಎಸ್‍ಪಿಯಾಗಿದ್ದು, ಹುದ್ದೆಗೆ ರಾಜೀನಾಮೆ ನೀಡಿ ಸರಕಾರದ ವಿರುದ್ಧ ನೇರ ಸಮರಕ್ಕೆ ಇಳಿದಿರುವ ಅನುಪಮಾ ಶೆಣೈ ಅವರು ಪೊಲೀಸ್ ಕರ್ತವ್ಯ ಆರಂಭಿಸಿದ್ದು ಕೊಡಗಿನಿಂದ. ರಾಜೀನಾಮೆ ಬಳಿಕ ಅಜ್ಞಾತವಾಗಿದ್ದು, ಸಾಮಾಜಿಕ ತಾಣಗಳ ಮೂಲಕ ವಿವಿಧ ಸಂದೇಶದ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಬಹಿರಂಗ ಸಮರ ಸಾರುವ ಮೂಲಕ ರಾಜ್ಯಾದ್ಯಂತ ಸುದ್ದಿಯಾಗಿರುವ ಅನುಪಮಾ ಶೆಣೈ ಪೊಲೀಸ್ ಇಲಾಖೆಗೆ ಆಯ್ಕೆಯಾದ ಬಳಿಕ ಕರ್ತವ್ಯಕ್ಕೆ ಆಗಮಿಸಿದ್ದು ಪ್ರಥಮವಾಗಿ ಕೊಡಗು ಜಿಲ್ಲೆಗೆ. ಡಿವೈಎಸ್‍ಪಿಯಾಗಿ ಆಯ್ಕೆಯಾದ ಬಳಿಕ ಪ್ರೊಬೆಷನರಿ ತರಬೇತಿಗಾಗಿ ಇವರನ್ನು ಇಲಾಖೆ ನಿಯೋಜಿಸಿದ್ದು ಕೊಡಗಿಗೆ.

8.7.2013 ರಂದು ಪ್ರೊಬೆಷನರಿ ತರಬೇತಿಗೆ ಆಗಮಿಸಿದ ಇವರು ಪ್ರಥಮವಾಗಿ ಮಡಿಕೇರಿಯಲ್ಲಿ ವರದಿ ಮಾಡಿಕೊಂಡರು. ಮಡಿಕೇರಿ ಠಾಣೆಯಲ್ಲಿ 2ವಾರ, ಸೋಮವಾರಪೇಟೆಯಲ್ಲಿ 2 ವಾರ, ವೀರಾಜಪೇಟೆ ನಗರ ಠಾಣೆಯಲ್ಲಿ 4ವಾರ, ಗ್ರಾಮಾಂತರ ಠಾಣೆಯಲ್ಲಿ 4ವಾರ, ಮಡಿಕೇರಿ ಡಿವೈಎಸ್‍ಪಿ ಕಚೇರಿಯಲ್ಲಿ 4 ವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ 1ವಾರ, ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ಒಂದು ವಾರ ತರಬೇತಿ ಪಡೆದು ಬಳಿಕ ಕೆಎಸ್‍ಆರ್‍ಪಿಯಲ್ಲಿ ತರಬೇತಿಗೆ ತೆರಳಿದ್ದರು. ಇದಾದ ಬಳಿಕ 4.9.2014 ರಂದು ಜಿಲ್ಲೆಯಿಂದ ತೆರಳಿದ ಅವರು, ನೇರವಾಗಿ ಡಿವೈಎಸ್‍ಪಿ ಅಧಿಕಾರವನ್ನು ವಹಿಸಿಕೊಂಡಿದ್ದು, ಈಗ ಸುದ್ದಿಗೆ ಗ್ರಾಸವಾಗಿರುವ ಕೂಡ್ಲಿಗಿಯಲ್ಲೇ ವೀರಾಜಪೇಟೆ ಡಿವೈಎಸ್‍ಪಿಯಾಗಿರುವ ಕುಮಾರಚಂದ್ರ ಹಾಗೂ ಅನುಪಮಾಶಣೈ ಒಂದೇ ಬ್ಯಾಚ್‍ನವರಾಗಿದ್ದಾರೆ. ಕುಮಾರಚಂದ್ರ ಅವರು ಚಿಕ್ಕಮಗಳೂರಿನಲ್ಲಿ ಪ್ರೊಬೆಷನರಿ ತರಬೇತಿ ಪಡೆದು ವೀರಾಜಪೇಟೆ ನಿಯೋಜಿತರಾದರೆ, ಅನುಪಮಾ ಕೊಡಗಿನಲ್ಲಿ ತರಬೇತಿ ಪಡೆದು ಕೂಡ್ಲಿಗಿಗೆ ನಿಯೋಜಿತರಾಗಿದ್ದರು.