*ಗೋಣಿಕೊಪ್ಪಲು, ಜು. 18: ಜನಸಾಮಾನ್ಯರಿಗೆ ಅನುಕೂಲವಾಗಲಿ ಎಂದು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚಮಾಡಿ ಆಸ್ಪತ್ರೆಗಳನ್ನು ಕಟ್ಟಿಸಿದೆ. ಆದರೆ ಅದೇ ಸರ್ಕಾರ ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿ ಗಳನ್ನು ನೇಮಿಸದೇ ಅವುಗಳನ್ನು ಮುಚ್ಚುವಂತೆಯೂ ಮಾಡಿದೆ. ಇದಕ್ಕೆ ನಿದರ್ಶನ ವೀರಾಜಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗಳು.ವೀರಾಜಪೇಟೆ ತಾಲೂಕಿನಲ್ಲಿ ಮೂರು ಸಮುದಾಯ ಆರೋಗ್ಯ ಕೇಂದ್ರಗಳು, ಒಂದು ತಾಲೂಕು ಆರೋಗ್ಯ ಕೇಂದ್ರವಿದೆ. ಆದರೆ ಇವುಗಳಲ್ಲಿ ಒಂದರಲ್ಲಿಯೂ ತೀರ ಅಗತ್ಯವಿರುವ ಎಕ್ಸರೇ ಟೆಕ್ನಿಷಿಯನ್ ಇಲ್ಲ. ಗೋಣಿಕೊಪ್ಪಲು ಆರೋಗ್ಯ ಕೇಂದ್ರದಲ್ಲಿ ಸುಮಾರು 30 ವರ್ಷ ಎಕ್ಸ್‍ರೇ ಟೆಕ್ನಿಷಿಯನ್ ಆಗಿ ಕರ್ತವ್ಯ ನಿರ್ವಹಿಸಿದ್ದ ಶಿವನಂಜಯ್ಯ ಕಳೆದ ವರ್ಷ ತೀರಿಕೊಂಡ ಬಳಿಕ ಮತ್ತೆ ಎಕ್ಸ್‍ರೆ ಕೊಠಡಿಯ ಬಾಗಿಲು ತೆರೆಯಲೇ ಇಲ್ಲ. ಸರ್ಕಾರ ಈ ಹುದ್ದೆಗೆ ಮತ್ತೊಬ್ಬರನ್ನು ನೇಮಿಸದ ಕಾರಣ ಎಕ್ಸ್‍ರೇ ಕೊಠಡಿ ಧೂಳು ತಿನ್ನುತ್ತಾ ಬಿದ್ದಿದೆ. ಲಕ್ಷಾಂತರ ರೂ. ಮೌಲ್ಯದ ಯಂತ್ರಗಳು ಕೂಡ ತುಕ್ಕು ಹಿಡಿಯುತ್ತಿವೆ. ಇದರಿಂದ ಕೂಲಿ ಕಾರ್ಮಿಕ ಬಡಜನತೆಗೆ ಅನಾನುಕೂಲವಾಗಿದೆ.

ಕೆಲಸ ಮಾಡುವಾಗ ಕೈಕಾಲು ನೋವು ಮಾಡಿಕೊಂಡು ಬರುವ ಕಾರ್ಮಿಕ ಸಂಖ್ಯೆ ಹೆಚ್ಚಿದ್ದು, ಟೆಕ್ನಿಷಿಯನ್ ಶಿವನಂಜಯ್ಯ ಇದ್ದಾಗ ಕಾರ್ಮಿಕರು ಸಾಲು ಗಟ್ಟಿ ನಿಲ್ಲುತ್ತಿದ್ದರು. ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ಎಕ್ಸ್‍ರೇ ತೆಗೆದುಕೊಡುತ್ತಿ ದ್ದರೆ, ಇತರರಿಗೆ ಕೇವಲ ರೂ 60 ತೆಗೆದುಕೊಳ್ಳುತ್ತಿದ್ದರು. ಇದರಿಂದ ಮೂಳೆ ಮುರಿದು ಕೊಂಡು ಬಂದ ಬಡವರ ಚಿಕಿತ್ಸೆಗೆ ತುಂಬ ಸಹಕಾರಿ ಯಾಗಿತ್ತು.ಇದೀಗ ಎಕ್ಸ್‍ರೆ ಕೊಠಡಿಯ ಬಾಗಿಲು ಬಂದ್ ಆಗಿರುವದರಿಂದ ಬಡವರಿಗೆ ಎಕ್ಸ್‍ರೆ ಕೈಗೆಟುಕದಾಗಿದೆ. ಖಾಸಗಿಯಲ್ಲಿ ಎಕ್ಸ್‍ರೆÉ ತೆಗೆಯಲು ಕನಿಷ್ಟ ರೂ 500 ತೆಗೆದುಕೊಳ್ಳುತ್ತಾರೆ. ಇಷ್ಟೊಂದು ಹಣವನ್ನು ಬಡವರು ಕೊಡಲು ಪರದಾಡುವಂತಾಗಿದೆ

ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅವರನ್ನು ಕೇಳಿದರೆ ಬಹಳಷ್ಟು ಕಡೆಗಳಲ್ಲಿ ಎಕ್ಸ್‍ರೆ ಟೆಕ್ನಿಷಿಯನ್ ಹುದ್ದೆ ಖಾಲಿ ಇದೆ. ಸರ್ಕಾರ ಹುದ್ದೆ ಭರ್ತಿ ಮಾಡಿದರೆ ಅನುಕೂಲವಾಗಲಿದೆ. ಗೋಣಿಕೊಪ್ಪಲು ಸೇರಿದಂತೆ ಸಿದ್ದಾಪುರ, ಕುಟ್ಟದಲ್ಲಿಯೂ ಟೆಕ್ನಿಷಿಯನ್ ಇಲ್ಲ. ತಾಲೂಕು ಕೇಂದ್ರ ವೀರಾಜಪೇಟೆ ಯಲ್ಲಿಯೂ ಖಾಲಿ ಉಳಿದಿದೆ. ತಾತ್ಕಾಲಿಕವಾಗಿ ನೇಮಿಸಿಕೊಂಡಿದ್ದ ಟೆಕ್ನಿಷಿಯನ್ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಇದರಿಂದ ರೋಗಿಗ ಳಿಗೆ ತೊಂದರೆಯಾಗುತ್ತಿದೆ ಎಂದರು.

ಎಕ್ಸ್‍ರೆ ಟೆಕ್ನಿಷಿಯನ್ ಜತೆಗೆ ಈ ಮೂರು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರೂ ಇಲ್ಲ. ಅಗತ್ಯವಿರುವಷ್ಟು ನರ್ಸ್ ಕೂಡ ಇಲ್ಲ. ಹೀಗಾಗಿ ಬಡವರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳು ಇದ್ದೂ ಇಲ್ಲದಂತಾಗಿವೆ. ತೀರ ಅನಿವಾರ್ಯವಾದಾಗ ಸಾಲಮಾಡಿ ಸಾವಿರಾರು ರೂಪಾಯಿ ಗಳನ್ನು ತೆತ್ತು ಖಾಸಗಿ ಆಸ್ಪತ್ರೆಯಲ್ಲಿ ಎಕ್ಸ್‍ರೆ ತೆಗೆಸಿ ಚಿಕಿತ್ಸೆ ಪಡೆಯುವ ಸ್ಥಿತಿ ಬಂದೊದಗಿದೆ.