ಕೂಡಿಗೆ, ನ. 28: ಸಮೀಪದ ಗ್ರಾಮದ ಗ್ರಾಮ ದೇವತೆ ಶ್ರೀ ಬನಶಂಕರಿ ಅಮ್ಮನವರ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವವು ತಾ. 29 ರಂದು (ಇಂದು) ನಡೆಯಲಿದೆ.

ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ 7 ಗÀಂಟೆಗೆ ಗಣಪತಿ ಪೂಜೆ, ಪುಣ್ಯಾಹ, ರಕ್ಷಾಬಂಧನ, ಧ್ವಜಾರೋಹಣ, ನವಗ್ರಹ ಕಲಶಗಳ ಸ್ಥಾಪನೆ, ಪೂಜೆ, ಮಹಾ ಮಂಗಳಾರತಿ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯಗಳು ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆಯಲಿವೆ.

ಬೆಳಿಗ್ಗೆ 10 ಗಂಟೆಯಿಂದ ಗಣಹೋಮ, ದುರ್ಗಾ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ, 12 ಗಂಟೆಗೆ ಬಲಿಪ್ರಧಾನ, ಕುಸ್ಮಾಂಡ ಬಲಿ, ಅಭಿಷೇಕ ಮಹಾಪೂಜೆ, ಮಹಾಮಂಗಳಾರತಿ ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಗೆ ದೇವಿಯನ್ನು ಹೂವಿನಿಂದ ಅಲಂಕರಿಸಲಾಗುತ್ತದೆ. ರಾತ್ರಿ 8 ಗಂಟೆಗೆ ಹಣ್ಣುತುಪ್ಪ, ನೈವೇಧ್ಯ, ರಾತ್ರಿ 10.30ಕ್ಕೆ ಶ್ರೀ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ವಿದ್ಯುತ್ ಅಲಂಕೃತ ಮಂಟಪದಲ್ಲಿ ಬನಶಂಕರಿ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಉತ್ಸವ ಮೂತಿಯನ್ನು ಮೆರವಣಿಗೆ ಮೂಲಕ ಪವಿತ್ರ ಬನಕ್ಕೆ ಕೊಂಡೊಯ್ಯಲಾಗುತ್ತದೆ. ದೇವಿಯ ಉತ್ಸವದೊಂದಿಗೆ ಗ್ರಾಮದ ಇತರೆ ಭಾಗಗಳಿಂದ ಹೊರಡುವ ಉತ್ಸವ ಮಂಟಪಗಳ ಶೋಭಾಯಾತ್ರೆಯು ಹಬ್ಬಕ್ಕೆ ಮೆರುಗು ನೀಡಲಿದೆ. ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಮಧ್ಯರಾತ್ರಿ 12.30ಕ್ಕೆ ಆರಂಭವಾಗುವ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯಲಿದೆ.

ತಾ. 30ರ ಮುಂಜಾನೆ 2.30ಕ್ಕೆ ಹರಕೆ ಹೊತ್ತ ಭಕ್ತಾದಿಗಳು 9 ದಿವಸ ಉಪವಾಸ ವ್ರತ ಆಚರಿಸಿ ಬನದಲ್ಲಿ ಸ್ಥಾಪಿಸಲಾಗಿರುವ ಅಗ್ನಿಕುಂಡ ತುಳಿದು ದೇವಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.

ಹಬ್ಬಕ್ಕೆ ದೇಶ-ವಿದೇಶದಲ್ಲಿ ನೆಲಸಿರುವ ಗ್ರಾಮಸ್ಥರು, ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನತೆ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರೂ ಮಂದಿ ಆಗಮಿಸುತ್ತಾರೆ.

ಜಾನಪದ ಕ್ರೀಡಾಕೂಟ: ಗ್ರಾಮದೇವತೆ ಶ್ರೀ ಬನಶಂಕರಿ ದೇವಿ ವಾರ್ಷಿಕ ಹಬ್ಬದ ಅಂಗವಾಗಿ ಮಾದರಿ ಯುವಕ ಸಂಘದ ವತಿಯಿಂದ ಎತ್ತಿನ ಗಾಡಿ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಜಾನಪದ ಕ್ರೀಡಾಕೂಟ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಯನ್ನೂ ಏರ್ಪಡಿಸಲಾಗಿದೆ.