ಮಡಿಕೇರಿ, ಆ. 13: ಕೊಡಗಿನಲ್ಲಿ ಮಳೆಗಾಲದ ಒಲಂಪಿಕ್ಸ್ ಎಂಬಂತೆ ಜನಪ್ರಿಯವಾಗುತ್ತಿರುವ ಕೆಸರುಗದ್ದೆ ಕ್ರೀಡೋತ್ಸವ ಪ್ರಸ್ತುತ ಹಲವಾರು ಕಡೆಗಳಿಗೆ ಪಸರಿಸುತ್ತಿದೆ. ಈ ಹಿಂದೆ ಗ್ರಾಮ ಗ್ರಾಮಗಳಲ್ಲಿ ನಡೆಯುತ್ತಿದ್ದ ಕೆಸರುಗದ್ದೆ ಕ್ರೀಡೆ ಕಾಲಾನುಕ್ರಮದಲ್ಲಿ ಮರೆಯಾಗುತ್ತಾ ಬಂದಿತ್ತು. ಆಧುನೀಕರಣದ ಭರಾಟೆಯಲ್ಲಿ ಇದು ಮರೆಯಾಗುತ್ತಿದ್ದ ಸಂದರ್ಭದಲ್ಲಿ ನೆಹರು ಯುವಕೇಂದ್ರ, ಯೂತ್ ಹಾಸ್ಟೆಲ್ ವತಿಯಿಂದ ಕಗ್ಗೋಡ್ಲುವಿನ ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ಕಳೆದ 25 ವರ್ಷಗಳ ಹಿಂದೆ ಮರೆÉಯಾಗುತ್ತಿದ್ದ ಗ್ರಾಮೀಣ ಕ್ರೀಡೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಇಂದು ಬೆಳ್ಳಿಹಬ್ಬದ ಸಂಭ್ರಮ... ಬೆಳ್ಳಿ ಹಬ್ಬದ ಅಂಗವಾಗಿ ಈ ಹಿಂದಿನ ವರ್ಷಗಳಲ್ಲಿ ನಡೆದುಕೊಂಡು ಬರುತ್ತಿದ್ದ ಕೆಸರಿನಾಟದೊಂದಿಗೆ ಈ ಬಾರಿ ವಿಶೇಷವಾಗಿ ಕಾಲ್ಚೆಂಡು (ಫುಟ್ಬಾಲ್) ಪಂದ್ಯಾಟವನ್ನು ಆಯೋಜಿಸ ಲಾಗಿದ್ದು, ಬೆಳ್ಳಿಹಬ್ಬದ ಸಂಭ್ರಮಕ್ಕೆ ಕೆಸರಿ ನೋಕುಳಿಯಲ್ಲಿ ನಡೆದ ಕಾಲ್ಚೆಂಡಿನಾಟ ಹೆಚ್ಚಿನ ಮುದ ನೀಡಿತು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಜಿಲ್ಲಾ ಪಂಚಾಯತ್, ಯೂತ್ ಹಾಸ್ಟೆಲ್ ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಸಹಭಾಗಿತ್ವದಲ್ಲಿ ಇಂದು ಕಗ್ಗೋಡ್ಲುವಿನ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವ ಜನಮನ ರಂಜಿಸಿತು.

ಹಗ್ಗ ಜಗ್ಗಾಟ, ವಾಲಿಬಾಲ್, ಓಟದ ಸ್ಪರ್ಧೆ, ಸಾಂಪ್ರದಾಯಿಕ ನಾಟಿ ಓಟದೊಂದಿಗೆ, ಈ ಬಾರಿಯ ಆಕರ್ಷಣೆಯಾಗಿ ನಡೆದ ಕಾಲ್ಚೆಂಡಿನಾಟ ಕ್ರೀಡಾಸಕ್ತರ ಮನರಂಜಿಸಿತು.

ಪುರುಷರು, ಮಹಿಳೆಯರು, ಶಾಲಾ - ಕಾಲೇಜು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಮಳೆ- ಚಳಿಯ ನಡುವೆ ಕೆಸರಿನಲ್ಲಿ ಮಿಂದೇಳುವ ಮೂಲಕ ನೋಡುಗರನ್ನು ರಂಜಿಸಿದರಲ್ಲದೆ, ಕ್ರೀಡಾ ಸಾಮಥ್ರ್ಯ ದೊಂದಿಗೆ ಇತರರಿಗೂ ಉತ್ತೇಜನ ನೀಡಿದರು. ಈ ಬಾರಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಕರ ಪಾಲ್ಗೊಳ್ಳುವಿಕೆ ಕಂಡುಬಂದಿತು. ಬೆಳಿಗ್ಗೆ 11ರ ನಂತರ ಆರಂಭಗೊಂಡ ವಿವಿಧ ಕ್ರೀಡೆಗಳು ಸಂಜೆತನಕವೂ ನಡೆಯಿತು. ಮಡಿಕೇರಿ- ವೀರಾಜಪೇಟೆ ಮುಖ್ಯ ರಸ್ತೆಯ ಬದಿಯಲ್ಲಿನ ಗದ್ದೆಯಲ್ಲಿ ಕ್ರೀಡಾಸ್ಪರ್ಧೆ ನಡೆಯುವದರಿಂದ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗಿತ್ತು. ರಸ್ತೆಯುದ್ದಕ್ಕೂ ಕಿಕ್ಕಿರಿದು ನೆರೆದಿದ್ದ ಕ್ರೀಡಾಭಿಮಾನಿಗಳು ಕೆಸರಿನಲ್ಲಿ ಎದ್ದು ಬಿದ್ದು ರಂಜಿಸುತ್ತಿದ್ದವರನ್ನು ಶಿಳ್ಳೆ, ಚಪ್ಪಾಳೆ, ಹರ್ಷೋದ್ಘಾರದೊಂದಿಗೆ ಮತ್ತಷ್ಟು ಪ್ರೋತ್ಸಾಹಿಸುತ್ತಿದ್ದರು. ಹಗ್ಗ ಜಗ್ಗಾಟ ಸ್ಪರ್ಧೆ ಹೆಚ್ಚು ರೋಚಕವಾಗಿತ್ತು. ಮಂಡ್ಯದಿಂದ ಹಗ್ಗಜಗ್ಗಾಟ ಸ್ಪರ್ಧೆಗೆಂದೇ ಕೆ.ಎಸ್.ಆರ್.ಪಿ. ಪೊಲೀಸರು ಆಗಮಿಸಿದ್ದರು. ಅಪರಾಹ್ನದ ತನಕ ಮಳೆ ಕಡಿಮೆ ಇತ್ತಾದರೂ ನಂತರ ಆಗಾಗ್ಗೆ ಮಳೆ ಸುರಿಯಿತು. ಮಳೆಯನ್ನು ಲೆಕ್ಕಿಸದೆ ಬೆಳಿಗ್ಗೆಯಿಂದಲೇ ಕೆಸರಿನೋಕುಳಿಯಲ್ಲಿ ಸಂತಸದಿಂದ ಕಾಲ ಕಳೆದ ಮಂದಿ ನೋಡುಗರನ್ನು ಕೆಸರಿಗಿಳಿಯುವಂತೆ ಮಾಡಿದರು. ಪುಟ್ಟ ಮಕ್ಕಳೂ ಹಿರಿಯರೊಂದಿಗೆ ಕೆಸರಿನಾಟದ ಸವಿ ಅನುಭವಿಸಿದರು.