ಗೋಣಿಕೊಪ್ಪಲು, ಅ. 10: ಗೋಣಿಕೊಪ್ಪಲಿನ ಪರಿಮಳ ಮಂಗಳ ವಿಹಾರದ ಸಭಾಂಗಣದಲ್ಲಿ ಮೂರನೇ ವರ್ಷದ ಮಹಿಳಾ ದಸರಾವನ್ನು ಮೂರನೇ ಬಾರಿಗೆ ಉದ್ಘಾಟಿಸುವದರ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಒಳ್ಳೆಯ ಮನಸ್ಸು, ಒಳ್ಳೆಯತನದಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ. ದಸರೆ ಆಚರಣೆಯಲ್ಲಿ ರಾಜಕೀಯ ಬೆರಸಬೇಡಿ ಎಂದು ಹೇಳಿದರು.

ಎಲ್ಲಿ ಮಹಿಳೆಯರ ಮೇಲೆ ಪೂಜ್ಯ ಭಾವನೆ ಇರುತ್ತದೆಯೋ ಅಲ್ಲಿ ದೇವಾನುದೇವತೆಗಳು ನೆಲೆಸಿರುವದಾಗಿ ಹೇಳುತ್ತಾರೆ. ಗೌರಿ ಹಬ್ಬದ ನಂತರ ಮಾತೆ ಚಾಮುಂಡಿ ದೇವಿಯನ್ನು ಪೂಜಿಸುವ ವಿಜಯದಶಮಿ ಬಂದಿದೆ. ಮುಂದೆ ಮಾತೆ ಕಾವೇರಿಯನ್ನು ಪೂಜಿಸುವ ಹಬ್ಬ ಬರಲಿದ್ದು, ಪುರಾಣ ಕಾಲದಿಂದಲೂ ಮಹಿಳೆಯರಿಗೆ ವಿಶೇಷ ಗೌರವ ಸ್ಥಾನಮಾನ ನೀಡುತ್ತಾ ಬರಲಾಗುತ್ತಿದೆ. ಇಂದು ಕ್ರೀಡೆ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆ ಮುಂದಾಗಿದ್ದು, ಜಿಲ್ಲೆಯ ಮಹಿಳೆಯರು ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕೆಂದು ಶುಭ ಹಾರೈಸಿದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ವೀರಾಜಪೇಟೆಯ ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಗೋಣಿಕೊಪ್ಪಲು ದಸರಾ ಹಬ್ಬ ವಿನೂತನವಾಗಿ 38ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಎರಡು ವರ್ಷ ಯಶಸ್ವಿ ಮಹಿಳಾ ದಸರ ಆಚರಣೆಯಾಗಿ ಇದೀಗ ತೃತೀಯ ವರ್ಷವೂ ಎಲ್ಲಾ ಸ್ಥರದ ಮಹಿಳೆಯರನ್ನು ಒಂದೂಗೂಡಿಸುವಲ್ಲಿ ಪ್ರವಿ ಮೊಣ್ಣಪ್ಪ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಮಹಿಳೆಯರಿಗೆ ಗೌರವ ಕೊಡುವದನ್ನು ಕಲಿಯಬೇಕು.