ವೀರಾಜಪೇಟೆ, ಜು. 22: ಕೇಂದ್ರ ಸರಕಾರವು ಪಟ್ಟಣದಲ್ಲಿ ವಾಸಿಸುತ್ತಿರುವ ಎಲ್ಲಾ ಬಡ ಕುಟುಂಬಗಳಿಗೆ 2022ರ ಅಂತ್ಯಕ್ಕೆ ಮನೆ ಒದಗಿಸುವ ನಿಟ್ಟಿನಲ್ಲಿ “ಸರ್ವರಿಗೂ ಸೂರು 2022” ಯೋಜನೆಯ ಅಭಿಯಾನದಡಿ ವೀರಾಜಪೇಟೆ ಪಟ್ಟಣ ಪಂ. 15 ಮಂದಿ ಸಿಬ್ಬಂದಿಗಳಿಗೆ ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ತರಬೇತಿ ನೀಡಲಾಯಿತು.ಯೋಜನೆಯ ಪ್ರಕಾರ ಆರ್ಥಿಕವಾಗಿ ಹಿಂದುಳಿದವರು, ಬಡವರು, ಕಡು ಬಡವರು, ನಿರ್ಗತಿಕರು, ದುರ್ಬಲ ವರ್ಗದವರು, ನಿರಾಶ್ರಿತರು, ಕಡಿಮೆ ಆದಾಯ ವರ್ಗದವರು, ನಿವೇಶನ ಇದ್ದು ಮನೆ ಕಟ್ಟಲು ಆಗದವರು, ಸಣ್ಣ ಮನೆಯ ಮಾಲೀಕರು ಅದನ್ನು ವಿಸ್ತರಿಸಲು, ನಿವೇಶನ ರಹಿತರುಗಳನ್ನು ಈ ಯೋಜನೆಯ ಅರ್ಹತೆಯ ಆಧಾರದ ಮೇಲೆ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವದು ಎಂದು ತರಬೇತಿ ಸಮಯದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ತಿಳಿಸಿದರು.

ಪಟ್ಟಣ ಅಥವಾ ನಗರದಲ್ಲಿರುವ ಕೊಳಚೆ ಪ್ರದೇಶದಲ್ಲಿ ಖಾಲಿ ಇರುವ ಜಾಗವನ್ನು ಗುರುತಿಸಿ ನಿವೇಶನ ರಹಿತ ಫಲಾನುಭವಿಗಳಿಗೆ ಸಾಮೂಹಿಕವಾಗಿ ಆರ್.ಸಿ.ಸಿ. ಮನೆ ಕಟ್ಟಿ ಕೊಡಲಾಗುವದು. ಖಾಲಿ ಇರುವ ಜಾಗವನ್ನು ಗುರುತಿಸಿ ಕಡು ಬಡವರಿಗೆ ಮನೆ ಕಟ್ಟಲು ಈ ಯೋಜನೆಯಲ್ಲಿ ಆದ್ಯತೆ ನೀಡಲಾಗುವದು.ಇನ್ ಸೈಟ್ ಯೋಜನೆ

ಭೂಮಿಯನ್ನು ಸಂಪನ್ಮೂಲ ವಾಗಿರಿಸಿಕೊಂಡು ಕೊಳಚೆ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ಮಾಡಿ ಅರ್ಹರನ್ನು ಗುರುತಿಸಿ ಪಟ್ಟಿ ಮಾಡಿ ಅನುಷ್ಠಾನಗೊಳಿಸಲಾಗುವದು. ಕ್ರೆಡಿಟ್ ಲಿಂಕ್ ಸಬ್ಸಿಡಿ ಯೋಜನೆಯಲ್ಲಿ ಕಡಿಮೆ ಆದಾಯ ವರ್ಗದವರಿಗೆ ಶೇಕಡ 6.5ರ ಸಬ್ಸಿಡಿ ಸಹಾಯ ಧನದ ಬಡ್ಡಿಯಲ್ಲಿ ಮನೆ ನಿರ್ಮಾಣ, ಖರೀದಿ, ವಿಸ್ತರಣೆಗೆ ರೂ. 6 ಲಕ್ಷದವರೆಗೆ ಬ್ಯಾಂಕ್ ಸಾಲ ಒದಗಿಸಲಾಗುವದು. ಫಲಾನುಭವಿಗಳ ನೇತೃತ್ವದಲ್ಲಿ ಸ್ವಯಂ ಮನೆ ನಿರ್ಮಾಣಕ್ಕೆ ವಾಜಪೇಯಿ ವಸತಿ ಯೋಜನೆಯಡಿಯಲ್ಲಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಸಾಮಾನ್ಯ ವರ್ಗದವರಿಗೆ, ಎಸ್.ಸಿ, ಎಸ್.ಟಿ. ವರ್ಗದವರಿಗೆ ರೂ 1.20 ಲಕ್ಷದಿಂದ 1.80 ಲಕ್ಷದವರೆಗೆ ಸಹಾಯಧನ ನೀಡಲಾಗುವದು ಎಂದು ಸಿಬ್ಬಂದಿಗಳ ತರಬೇತಿ ಸಂದರ್ಭದಲ್ಲಿ ಕೃಷ್ಣಪ್ರಸಾದ್ ತಿಳಿಸಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಯೋಜನಾಧಿಕಾರಿ ಶೈಲಾ ಅವರು ಮಾತನಾಡಿ, ಸ್ವಂತ ಮನೆ ಇದ್ದು ಅದನ್ನು ವಿಸ್ತರಿಸಲಾಗದಿರುವವರು, ಬಾಡಿಗೆ ಮನೆಯಲ್ಲಿ ವಾಸಿಸುವವರು, ನಿರ್ಗತಿಕರು, ಬೀದಿ ವ್ಯಾಪಾರಿಗಳು ಈ ಯೋಜನೆ ಫಲಾನುಭವಿಗಳ ಪಟ್ಟಿಗೆ ಸೇರುತ್ತಾರೆ. ನಿಗದಿತ ಫಾರಂಗಳು ಕಚೇರಿಯಲ್ಲಿ ದೊರೆಯಲಿದೆ. ಹೆಚ್ಚಿನ ಮಾಹಿತಿಯನ್ನು ಕಚೇರಿ ವೇಳೆಯಲ್ಲಿ ಪಡೆಯಲು ಅವಕಾಶವಿದೆ ಎಂದರು.

ಮನೆ ಮನೆ ಭೇಟಿಗೆ ಇಂದಿನಿಂದ ಚಾಲನೆ

ಇನ್ ಸೈಟ್ ಯೋಜನೆಯ ಪ್ರಯುಕ್ತ ಪಟ್ಟಣ ಪಂಚಾಯಿತಿಯ ತರಬೇತಿ ಪಡೆದ 15 ಮಂದಿ ಸಿಬ್ಬಂದಿ ಗಳು ತಾ.22ರಿಂದ (ಇಂದಿನಿಂದ) ಎಲ್ಲಾ ವಾರ್ಡ್‍ಗಳಲ್ಲಿಯು ಸಮೀಕ್ಷೆ ನಡೆಸಿ ಅರ್ಹರನ್ನು ಭೇಟಿ ಮಾಡಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಕೃಷ್ಣ ಪ್ರಸಾದ್ ತಿಳಿಸಿದ್ದಾರೆ. ತರಬೇತಿ ಶಿಬಿರದದಲ್ಲಿ ಪಟ್ಟಣ ಪಂಚಾಯಿತಿ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಉಪಸ್ಥಿತರಿದ್ದರು.