ನಾಪೋಕ್ಲು, ಆ. 13: ಕುಟುಂಬದವರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆ ಇಟ್ಟು ಸಾಮರಸ್ಯದ ಜೀವನ ನಡೆಸಬೇಕೆಂದು ಕೊಡಗು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಹಾಗೂ ನ್ಯಾಯಾಧೀಶ ಮೋಹನ್‍ಪ್ರಭು ಹೇಳಿದರು.ಸಮೀಪದ ಹಳೇ ತಾಲೂಕು ಭಗವತಿ ದೇವಾಲಯದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಡಿಕೇರಿ ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸ್ತ್ರೀ ಶಕ್ತಿ ಬಲವರ್ಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿ ದೌರ್ಜನ್ಯ ನಡೆಸಿದರೆ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಅಡಿ ಶಿಕ್ಷಾರ್ಹ ಅಪರಾಧ ಆಗಿರುವದರಿಂದ ಸೂಕ್ತ ರಕ್ಷಣೆ ಹಾಗೂ ಪರಿಹಾರವನ್ನು ಪಡೆದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಕಾನೂನು ಮತ್ತು ಕಾಯಿದೆ ಅರಿತುಕೊಳ್ಳುವದು ಉತ್ತಮ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಕೀಲೆ ವೀಣಾ ಕುಮಾರಿ ಮಹಿಳೆಯರಿಗೆ ಕಾನೂನಿನ ಅರಿವು ಹಾಗೂ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ಎಲ್‍ಹೆಚ್‍ವಿ ಗುಣವತಿ ಸ್ತನ್ಯಪಾನ ಸಪ್ತಾಹದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮುತ್ತುರಾಣಿ ಅಚ್ಚಪ್ಪ, ಪದ್ಮಿನಿ, ಪ್ರಬಾರ ಸಹಾಯಕ ಕೃಷಿ ಅಭಿವೃದ್ಧಿ ಯೋಜನಾಧಿಕಾರಿ ಸಿ.ಎಸ್. ಸಬಿತಾ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

- ದುಗ್ಗಳ