ಸೋಮವಾರಪೇಟೆ, ಜೂ.12: ಸೋಮವಾರಪೇಟೆಯಿಂದ ಶನಿವಾರಸಂತೆಗೆ ತೆರಳುವ ವೀರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೇ ನಿರ್ಮಿಸ ಲಾಗಿದ್ದ ಬೃಹತ್ ತಡೆಗೋಡೆಯೊಂದು ದಿಢೀರ್ ಕುಸಿದು ಬಿದ್ದ ಘಟನೆ ಇಂದು ಮುಂಜಾನೆ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ದುರಂತ ತಪ್ಪಿದೆ.

ಒಕ್ಕಲಿಗರ ಸಂಘದಿಂದ ನಡೆಸಲ್ಪ ಡುತ್ತಿರುವ ಬಿಟಿಸಿಜಿ ಪದವಿಪೂರ್ವ ಹಾಗೂ ಕುವೆಂಪು ವಿದ್ಯಾಸಂಸ್ಥೆ ಸಮೀಪ ನಿರ್ಮಿಸಲಾಗಿದ್ದ 25 ಮೀಟರ್ ಉದ್ದ ಹಾಗೂ 8 ಮೀ. ಎತ್ತರದ ಭಾರೀ ತಡೆಗೊಡೆಯೊಂದು ಭಾನುವಾರ ಬೆಳಗ್ಗಿನ ಜಾವ ಕುಸಿದು ಬಿದ್ದಿದೆ. ಭಾನುವಾರವಾಗಿದ್ದರಿಂದ ವಿದ್ಯಾರ್ಥಿಗಳ ಸಂಚಾರವಿರಲಿಲ್ಲ. ಹೀಗಾಗಿ ಯಾವದೇ ಅನಾಹುತ ಸಂಭವಿಸಿಲ್ಲ.

ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಧಿಯಿಂದ ರೂ. 40 ಲಕ್ಷ ವೆಚ್ಚದಲ್ಲಿ 125 ಮೀಟರ್ ಚರಂಡಿ ಹಾಗೂ ತಡೆಗೋಡೆ ಕಾಮಗಾರಿಯನ್ನು ಶನಿವಾರಸಂತೆ ಗುತ್ತಿಗೆದಾರರೊಬ್ಬರು ಗುತ್ತಿಗೆ ಪಡೆದಿದ್ದು,

ಸ್ಥಳೀಯ ಗುತ್ತಿಗೆದಾರರೊಬ್ಬರು ತುಂಡು ಗುತ್ತಿಗೆ ಪಡೆದು ಕಾಮಗಾರಿ ನಿರ್ವಹಿಸಿದ್ದರು.

ಕಳೆದ ವರ್ಷದ ಮಳೆಗಾಲದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಇದೇ ರಸ್ತೆಯ ಬದಿಯ ತಡೆಗೋಡೆ ಕುಸಿದು ರಸ್ತೆ ಬಿರುಕುಬಿಟ್ಟು ಆತಂಕ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಮಳೆಗಾಲ ಆರಂಭಕ್ಕೆ ಮುನ್ನವೇ ಬೃಹತ್ ತಡೆಗೋಡೆ ಕುಸಿದು ಬಿದ್ದಿರುವದು, ಲೋಕೋಪಯೋಗಿ ಇಲಾಖೆಯ ಕಾರ್ಯಲೋಪಕ್ಕೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 25 ಮೀ.ಉದ್ದ ಹಾಗೂ 8ಮೀ.ಎತ್ತರವಿರುವ ಬೃಹತ್ ತಡೆಗೋಡೆ ನಿರ್ಮಾಣಕ್ಕೆ ಇಲಾಖೆ ವೈಜ್ಞಾನಿಕ ಕ್ರಿಯಾಯೋಜನೆ ರೂಪಿಸದೇ ಇರುವದು ಇಂತಹ ದುರಂತಕ್ಕೆ ಕಾರಣ ಎಂಬದು ಮೇಲ್ನೋಟಕ್ಕೆ ತಿಳಿದುಬರುತ್ತದೆ. ಸಣ್ಣ ಸಣ್ಣ ಕಬ್ಬಿಣದ ಸರಳುಗಳನ್ನು ಬಳಸಿ ಕೇವಲ 2-3 ಅಡಿ ಆಳದ ಅಡಿಪಾಯದಲ್ಲಿ ತಡೆಗೋಡೆ ನಿರ್ಮಿಸಿರುವದರಿಂದ ಸಂಪೂರ್ಣ ತಡೆಗೋಡೆ ರಾಜ್ಯ ಹೆದ್ದಾರಿಗೆ ಮಗುಚಿ ಬಿದ್ದಿದೆ.

ತಡೆಗೋಡೆ ಕುಸಿತದಿಂದ ಆತಂಕಕ್ಕೆ ಒಳಗಾದ ಗುತ್ತಿಗೆದಾರ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭಾನುವಾರ ಬೆಳಿಗ್ಗೆಯಿಂದಲೇ ತಡೆಗೋಡೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ತಡೆಗೋಡೆ ಕುಸಿತಗೊಂಡಿರುವದನ್ನು ಪರಿಶೀಲನೆ ನಡೆಸಿದ್ದೇನೆ. ತುರ್ತು ಕ್ರಮ ಕೈಗೊಂಡು, ಕುಸಿದ ತಡೆಗೋಡೆ ತೆರವುಗೊಳಿಸಿ ತಕ್ಷಣವೇ ನೂತನ ತಡೆಗೋಡೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.