ಮೂರ್ನಾಡು, ಜ. 1: ಯಾವ ದೇಶ ತನ್ನ ಸಂಸ್ಕøತಿ ಹಾಗೂ ಸಂಸ್ಕಾರ ಮರೆಯುತ್ತದೆಯೋ ಆ ದೇಶ ಪತನ ಕಾಣಲಿದೆ. ಇದು ಕೇವಲ ಒಂದು ದೇಶಕ್ಕೆ ಸೀಮಿತವಲ್ಲ. ಒಂದು ರಾಜ್ಯ, ನಾಡು, ಜನಾಂಗ, ಸಂಸಾರಕ್ಕೂ ಅನ್ವಯವಾಗುತ್ತದೆ. ಆದ್ದರಿಂದ ಕೊಡವರು ತಮ್ಮ ಸಂಸ್ಕøತಿ, ಸಂಸ್ಕಾರವನ್ನು ಮರೆಯದೇ ಪೋಷಿಸಿಕೊಂಡು ಹೋಗಬೇಕು. ಕೊಡವರು ತಮ್ಮ ಶ್ರೀಮಂತ ಸಂಸ್ಕøತಿ-ಸಂಸ್ಕಾರವನ್ನು ಪೋಷಿಸಿದರೆ ಅದು ಜನಾಂಗವನ್ನು ಪೋಷಿಸುತ್ತದೆ ಎಂದು ಏಕಲವ್ಯ ಪ್ರಶಸ್ತಿ ವಿಜೇತ ಹಾಗೂ ಅಂತರ್ರಾಷ್ಟ್ರೀಯ ಅಥ್ಲಿಟ್ ತೀತಮಾಡ ಅರ್ಜುನ್ ದೇವಯ್ಯ ಪ್ರತಿಪಾದಿಸಿದರು.

ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೋ) ಸಂಘಟನೆ ವತಿಯಿಂದ ಪಾಂಡಾಣೆ ನಾಡ್ ಮಂದ್ ಆಶ್ರಯದಲ್ಲಿ ಮೂರ್ನಾಡು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ 3ನೇ ವರ್ಷದ ಮಂದ್‍ನಮ್ಮೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದ ಅವರು ಹೇಳಿದಂತೆ ಸಂಸ್ಕøತಿ-ಸಂಸ್ಕಾರ ತ್ಯಜಿಸಿದ ದೇಶ ಅವನತಿ ಹೊಂದುತ್ತದೆ. ಇದರಂತೆ ಸಂಸ್ಕøತಿ-ಸಂಸ್ಕಾರ ತ್ಯಜಿಸಿ ಆರ್ಥಿಕ ಅಭಿವೃದ್ಧಿ ಒಂದೇ ಚಿಂತನೆ ಮುಂದಿಟ್ಟುಕೊಂಡು ಉಳಿದೆಲ್ಲವೆಲ್ಲ ಗೌಣವಾಗಿ ಕಂಡ ಗ್ರೀಸ್ ದೇಶ ಅವನತಿ ಹೊಂದಿದೆ. ಆದರೆ ಭಾರತದಂತಹ ದೇಶದ ಮೇಲೆ ಅದೆಷ್ಟೋ ಬಾರಿ ಹೊರ ದೇಶದ ಆಕ್ರಮಣ, ದಬ್ಬಾಳಿಕೆ, ಆಡಳಿತಕ್ಕೆ ಒಳಪಟ್ಟರೂ ಇಲ್ಲಿನ ಉನ್ನತ ಸಂಸ್ಕøತಿ ಭಾರತವನ್ನು ಕಾಪಾಡಿದೆ ಎಂದು ಅರ್ಜುನ್ ದೇವಯ್ಯ ಅಭಿಪ್ರಾಯ ಪಟ್ಟರು.

ವಿಚಾರ ಮತ್ತು ತತ್ವ ಜನರ ಜೀವನ ಬದಲಾಯಿಸಲಾಗದು. ಅದನ್ನು ಅಳವಡಿಸಿಕೊಂಡಾಗ ಮಾತ್ರ ಬದಲಾವಣೆ ಸಾಧ್ಯ. ತನ್ನತನ ಬಿಟ್ಟರೆ ಬೇರೆಯದರ ಗುಲಾಮವಾಗಿದ್ದೇವೆ ಎಂದು ಅರ್ಥ ಆದ್ದರಿಂದ ತನ್ನ ತನವನ್ನು ಬಿಟ್ಟುಕೊಡದೇ ಜೀವಿಸುವಂತೆ ಕರೆ ನೀಡಿದರು.

ಆತ್ಮಾಭಿಮಾನ ಉಳ್ಳವರಿಗೆ ಆತ್ಮವಿಶ್ವಾಸವಿರುತ್ತದೆ. ಅಂತಹವರು ಜನಾಂಗಕ್ಕೆ ಕೇಡು ಬಯಸುವದಿಲ್ಲ. ಕೊಡವ ಸಂಘಟನೆಗಳ ಬಗ್ಗೆ, ಕೊಡವರ ಬಗ್ಗೆ ಇನ್ನೊಂದು ಕೊಡವ ನಿಂದನೆ ಮಾಡುವದನ್ನು ಹಿಂದೆ ಮಾತನಾಡುವದನ್ನು ನಿಲ್ಲಿಸುವಂತೆ ಕಿವಿಮಾತು ಹೇಳಿದರು.

ಮಂದ್‍ಗಳು ಶಕ್ತಿ-ಭಕ್ತಿಯ ಕೇಂದ್ರವಾಗಿದೆ. ಕೊಡವರ ವ್ಯಾಜ್ಯ-ವಿವಾದಗಳನ್ನು ಬಗೆಹರಿಸುವ ‘ಸುಪ್ರೀಂಕೋರ್ಟ್’ ಆಗಿದೆ. ಅವುಗಳಿಗೆ ಕಾಯಕಲ್ಪ ನೀಡಬೇಕು. ಮಂದ್‍ಗಳಲ್ಲಿ ಕೊಡವರು ಪ್ರತಿದಿನ ಸೇರಿ ಕೊಡವರ ಬಗ್ಗೆ ಚಿಂತಿಸುವ, ಚರ್ಚಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ನಾಡ್‍ತಕ್ಕ ಪಳಂಗಂಡ ಗಪ್ಪು ಗಣಪತಿ, ತಕ್ಕರಾದ ಕೋಟೇರ ರಘು ಕಾರ್ಯಪ್ಪ, ಮಡೆಯಂಡ ವಿಠಲ್ ಬೊಳ್ಯಪ್ಪ, ಕಾಳಿಮಾಡ ಡಾ. ಶಿವಪ್ಪ, ಯುಕೋ ಉಪಾಧ್ಯಕ್ಷ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ವಾಸು ಮಾದಪ್ಪ, ನಾಡ್ ತಕ್ಕರಾದ ಪಳಂಗಂಡ ಪೊನ್ನು ಪೊನ್ನಪ್ಪ, ಪಳಂಗಂಡ ಗಣೇಶ್ ಚೀಯಣ್ಣ, ಕೋಟೇರ ಪ್ರತಾಪ್ ಕಾರ್ಯಪ್ಪ, ಕೋಟೇರ ರಷ್ಯಾ ಮೇದಪ್ಪ, ಮಡೆಯಂಡ ಮಿಟ್ಟು ತಿಮ್ಮಯ್ಯ, ಮಡೆಯಂಡ ಮಣಿ ಮುದ್ದಪ್ಪ, ಕೊಡವ ಸಮಾಜ ಅಧ್ಯಕ್ಷ ಪಳಂಗಂಡ ಗಣೇಶ್, ಊರ್ ತಕ್ಕರಾದ ಕಿಗ್ಗಾಲ್‍ನ ಪುದಿಯೊಕ್ಕಡ ವಿಶ್ವನಾಥ್, ಬಾಡಗದ ಮುಕ್ಕಾಟಿರ ಆಟು ಚಂಗಪ್ಪ, ಮುತ್ತಾರ್ಮುಡಿಯ ಬರ್ತಂಡ ರಾಜ ಮೇದಪ್ಪ, ಐಕೊಳದ ಮುಂಡಂಡ ನಂಜಪ್ಪ ಹಾಜರಿದ್ದರು.

ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಸ್ವಾಗತಿಸಿ, ತಿರ್ಕಚೇರಿರ ಲಾಸ್ಯ ತೇಜಸ್ವಿ ನಿರೂಪಿಸಿ, ಮಂಜುಚಿಣ್ಣಪ್ಪ ವಂದಿಸಿದರು.

-ಅಣ್ಣೀರ ಹರೀಶ್ ಮಾದಪ್ಪ