ವೀರಾಜಪೇಟೆ: ಶಾಲೆಗಳಲ್ಲಿ ಹಸಿರು ಪರಿಸರಕ್ಕೆ ಹೆಚ್ಚು ಒತ್ತು ಕೊಡುವ ಮೂಲಕ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಪರಿಸರ ರಕ್ಷಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು ಎಂದು ಜಿಲ್ಲಾ ಜನತಾ ದಳದ ಕಾರ್ಯಾಧ್ಯಕ್ಷ ಹಾಗೂ ಸಮಾಜ ಸೇವಕರು ಆದ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾ ಸಂಸ್ಥೆ, ಇಕೋ ಕ್ಲಬ್ ಹಾಗೂ ಶನೀಶ್ವರ ಭಕ್ತಜನ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸಂತ ಅನ್ನಮ್ಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭ ಇದೇ ಶಾಲೆಯಲ್ಲಿ ಓದಿದ್ದ ತಮ್ಮ ಶಾಲಾ ದಿನಗಳನ್ನು ಅವರು ಮೆಲುಕು ಹಾಕಿದರು. ಮುಖ್ಯ ಶಿಕ್ಷಕರುಗಳಾದ ಶೆಲ್ವಿ, ಜಾನೆಟ್, ಬಿ.ಎಸ್. ದೇವರ್ ಉಪಸ್ಥಿತರಿದ್ದರು. ಪ್ರೌಢ ಶಾಲಾ ಶಿಕ್ಷಕಿ ಪಿ.ಬಿ. ವೀಣಾ ಗೌರಮ್ಮ ಪರಿಸರ ರಕ್ಷಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶನೀಶ್ವರ ಭಕ್ತಜನ ಮಂಡಳಿಯ ಯುವರಾಜು ಉಪಸ್ಥಿತರಿದ್ದರು.

ಶಿಕ್ಷಕಿ ಟೆಲಿನಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಭೆಯಲ್ಲಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮಡಿಕೇರಿ: ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಇಲಾಖೆಯಲ್ಲಿರುವ ತೋಟಗಾರಿಕೆ ಕ್ಲಿನಿಕ್‍ನಲ್ಲಿ ವಿಷಯ ತಜ್ಞರಾಗಿರುವ ಡಾ. ಬಲ್ಲಡಿಚಂಡ ನಾಚಪ್ಪ ಆಗಮಿಸಿದ್ದರು. ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. 9ನೇ ತರಗತಿ ವಿದ್ಯಾರ್ಥಿನಿ ಶ್ರದ್ಧಾ ಶಾಸ್ತ್ರಿ ದಿನದ ಮಹತ್ವದ ಕುರಿತು ಮಾತನಾಡಿದರು.ಶನಿವಾರಸಂತೆ: ಬೆಸೂರು ಪಂಚಾಯಿತಿ ವ್ಯಾಪ್ತಿಯ ಕಟ್ಟೆಪುರ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರಸಂತೆ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಎಂ.ಎಂ. ಅಚ್ಚಪ್ಪ ಮಾತನಾಡಿ, ಪ್ರತಿಯೊಬ್ಬರು ಗಿಡ-ಮರಗಳನ್ನು ನೆಟ್ಟು ಪರಿಸರವನ್ನು ಉಳಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಿ, ಪಂಚಾಯಿತಿ ಸದಸ್ಯ ಕುಮಾರ್, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಜಗದೀಶ್, ಶಾಲಾ ಮುಖ್ಯ ಶಿಕ್ಷಕ ರೇವಣ್ಣ, ಕೊಡ್ಲಿಪೇಟೆ ಉಪ ವಲಯದ ಅರಣ್ಯಾಧಿಕಾರಿ ಎಸ್.ವೈ. ಸುಕೂರ್, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಸೋಮವಾರಪೇಟೆ: ವಿಶ್ವ ಪರಿಸರ ದಿನ ಅಂಗವಾಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳು ಗಿಡ ನೆಡುವ ಮೂಲಕ ಆಚರಿಸಿತು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಹೊನ್ನಮ್ಮ ಕೆರೆಯ ದಡದಲ್ಲಿ ಸಸಿಗಳನ್ನು ನಡುವ ಮೂಲಕ ಗ್ರಾ.ಪಂ. ಅಧ್ಯಕ್ಷ ಸುಳಿಮಳ್ತೆ ದಿವಾಕರ್ ಚಾಲನೆ ನೀಡಿದರು. ಈ ಸಂದರ್ಭ ಪಂಚಾಯಿತಿ ಸದಸ್ಯರುಗಳಾದ ಶಿವನಂಜಪ್ಪ, ಈಶ್ವರಿ, ಸುರೇಶ್, ರವಿಕುಮಾರ್, ಗ್ರಾಮಾಭಿವೃದ್ಧಿ ಅಧಿಕಾರಿ ಜೆ.ಆರ್. ಹೇಮಲತಾ, ಕಾರ್ಯದರ್ಶಿ ಬಿ.ಎಸ್. ಸುರೇಶ್ ಹಾಗೂ ಇತರರು ಇದ್ದರು.

ತಾಲೂಕಿನ ಕಿರಗಂದೂರು ಗ್ರಾಪಂ, ಕಿರಗಂದೂರು ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರಾಥಮಿಕ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭ ಕಿರಗಂದೂರು ಗ್ರಾ.ಪಂ. ಅಧ್ಯಕ್ಷೆ ರಾಧಾ ಏಜಣ್ಣ, ಉಪಾಧ್ಯಕ್ಷ ಎಸ್.ಬಿ. ಸುರೇಂದ್ರ, ಸದಸ್ಯರುಗಳಾದ ಭರತ್, ಪಿ.ಬಿ. ಪೊನ್ನಪ್ಪ, ಗಿರೀಶ್ ಪೊನ್ನಪ್ಪ, ಸುನು ಕಿಶೋರ್, ಸುಜಾತ, ಪ್ರೇಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಧರ್ಮಪ್ಪ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್ ಮತ್ತಿತರರು ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದರು.