ಸೋಮವಾರಪೇಟೆ, ಅ. 28: ಪ್ರಸಕ್ತ ವರ್ಷವೂ ಮಳೆ ಕೈಕೊಟ್ಟಿದ್ದು, ತಾವು ಬೆಳೆದ ಬೆಳೆಗಳು ಒಣಗುತ್ತಿವೆ. ಕಾಫಿ, ಕಾಳು ಮೆಣಸು, ಭತ್ತ ನಾಶಗೊಳ್ಳುವ ಸಂಭವ ಎದುರಾಗಿದ್ದು, ಮಳೆಯನ್ನು ಕರುಣಿಸಿ ನಮ್ಮನ್ನು ಪಾರು ಮಾಡು ದೇವಾ ಎಂದು ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ.

ಮಳೆ ದೇವರೆಂದೇ ಪ್ರಸಿದ್ಧಿಯಾಗಿರುವ ತಾಲೂಕಿನ ಮಾಲಂಬಿ ಗ್ರಾಮದ ಬೆಟ್ಟದ ತುದಿಯಲ್ಲಿರುವ ಮಳೆ ಮಲ್ಲೇಶ್ವರನ ಸನ್ನಿಧಿಗೆ ತೆರಳಿದ ನೂರಾರು ಗ್ರಾಮಸ್ಥರು ಮಳೆ ಕರುಣಿಸುವಂತೆ ಮಲ್ಲೇಶ್ವರನಲ್ಲಿ ಪ್ರಾರ್ಥಿಸಿದರು.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಡಿಕೆಗಿಂತಲೂ ಮಳೆ ಕಡಿಮೆಯಾಗಿದ್ದು, ಬರಗಾಲ ಸ್ಪಷ್ಟ ಸೂಚನೆ ನೀಡಿದೆ. ಕಾಫಿ, ಮೆಣಸು, ಭತ್ತ ಸೇರಿದಂತೆ ತರಕಾರಿ ಬೆಳೆಗಳಿಗೂ ನೀರಿಲ್ಲದೇ ಇರುವದರಿಂದ ಕೃಷಿಕ ವರ್ಗ ಕಂಗಾಲಾಗಿದ್ದು, ತಲಕಾವೇರಿ ಜಾತ್ರೆ ಸಂದರ್ಭವಾದರೂ ಅಲ್ಪ ಮಳೆಯಾಗಿ ತುಸು ನೆಮ್ಮದಿ ಕಾಣುತ್ತಿತ್ತು. ಆದರೆ ಪ್ರಸಕ್ತ ವರ್ಷ ಮಾತ್ರ ಮಳೆ ಬೀಳದೇ ಇರುವದರಿಂದ ಸಂಕಷ್ಟ ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಗೌಡಳ್ಳಿ ಸೇರಿದಂತೆ ಸೋಮವಾರಪೇಟೆ ತಾಲೂಕು ಬರಗಾಲ ಎದುರಿಸುತ್ತಿದ್ದರೂ ಸರ್ಕಾರ ಸೋಮವಾರಪೇಟೆಯನ್ನು ಬರಪೀಡಿತ ಎಂದು ಘೋಷಿಸದೇ ಅನ್ಯಾಯವೆಸಗಿದೆ. ಸಹಕಾರ ಸಂಘಗಳಿಂದ ರೈತರು ಕೃಷಿ ಸಾಲ ಪಡೆದಿದ್ದು, ಇದೀಗ ಕೃಷಿ ಫಸಲು ನಷ್ಟಗೊಳ್ಳುವ ಹಿನ್ನೆಲೆ ಸಾಲ ಮರುಪಾವತಿ ಹೇಗೆ? ಎಂಬ ಪ್ರಶ್ನೆ ಮೂಡಿದೆ ಎಂದು ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್‍ಕುಮಾರ್ ಹೇಳಿದರು.

ಮಳೆಗಾಗಿ ಮಳೆ ಮಲ್ಲೇಶ್ವರನಿಗೆ ವಿಶೇಷ ಜೇನು ತುಪ್ಪ ಅಭಿಷೇಕ, ಎಳನೀರು ಅಭಿಷೇಕ ನೆರವೇರಿಸ ಲಾಯಿತು. ನಂತರ ನಂದಿಗುಂದ ಗ್ರಾಮದ ನಂಜುಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆಯಲ್ಲಿ ಗೌಡಳ್ಳಿ ಸುತ್ತಮುತ್ತಲಿನ ಹಿರಿಕರ, ಬೀಟಿಕಟ್ಟೆ, ಶುಂಠಿ,ಕೂಗೂರು, ಹಾರಳ್ಳಿ, ಕೋಟೆಯೂರು, ಹೆಗ್ಗಳ, ಚಿಕ್ಕಾರ, ಚೆನ್ನಾಪುರ, ಅಜ್ಜಳ್ಳಿ, ಶಾಂತವೇರಿ, ನಂದಿಗುಂದ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.