ಮಡಿಕೇರಿ, ಅ. 10: ಮಂಜಿನ ನಗರಿ ಮಡಿಕೇರಿಯಲ್ಲಿ ಐತಿಹಾಸಿಕ ದಸರಾ ಜನೋತ್ಸವ ಸಂಭ್ರಮ ನಡೆಯುತ್ತಿದ್ದರೆ, ನಗರಕ್ಕೆ ಆಗಮಿಸುವ ವಾಹನಗಳ ದಟ್ಟಣೆ ಮಿತಿಮೀರಿದೆ. ಇದರಿಂದ ಸ್ಥಳೀಯ ವಾಹನ ಸವಾರರು ಹಾಗೂ ನಗರ ಸಂಚಾರಿ ಪೊಲೀಸರು ಹರಸಾಹಸ ಪಡುವಂತಾಗಿದೆ.

ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಕೆಲವೆಡೆ ನಡೆದ ಅಹಿತಕರ ಘಟನೆಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಮಂಜಿನ ನಗರಿ ಮಡಿಕೇರಿ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು. ಜಿಲ್ಲೆಯ ಪ್ರವಾಸಿ ತಾಣಗಳಾದ ದುಬಾರೆ, ಕಾವೇರಿ, ನಿಸರ್ಗಧಾಮ, ಅಬ್ಬಿಫಾಲ್ಸ್, ರಾಜಾಸೀಟ್, ಮಾಂದಲ್‍ಪಟ್ಟಿ ಸೇರಿದಂತೆ ಹಲವು ಪ್ರವಾಸಿ ತಾಣಗಳು ಪ್ರವಾಸಿಗಳ ಕೊರತೆ ಎದುರಿಸುತ್ತಿತ್ತು. ಇದೀಗ ಈ ವಾರಾಂತ್ಯದಲ್ಲಿ ಪ್ರಾರಂಭ ಗೊಂಡ ದಸರಾ ರಜಾ ಹಾಗೂ ಸರ್ಕಾರಿ ರಜಾಗಳ ಬೆನ್ನಲ್ಲೇ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ವಾಹನಗಳ ಸಂಖ್ಯೆ ಏರತೊಡಗಿದೆ. ಇದರಿಂದ ಮಡಿಕೇರಿಯ ಜ. ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಖಾಸಗಿ ಬಸ್ ನಿಲ್ದಾಣ, ಚೌಕ್ ಸೇರಿದಂತೆ ಪ್ರಮುಖ ರಸ್ತೆ ಸೇರುವ ಸ್ಥಳಗಳಲ್ಲಿ ಪ್ರವಾಸಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ವಾಹನ ದಟ್ಟಣೆ ಕಂಡು ಬರುತ್ತಿದೆ.

ವಾಹನ ದಟ್ಟಣೆಯಿಂದ ಸಂಚಾರಿ ಪೊಲೀಸರು ಸಂಚಾರಿ ವ್ಯವಸ್ಥೆಯನ್ನು ನಿಭಾಯಿಸುವಲ್ಲಿ ಹರಸಾಹಸ ಪಡುತ್ತಿರುವದು ಕಂಡು ಬಂದಿದೆ.