ಮಡಿಕೇರಿ, ಆ. 13: ನಮ್ಮ ಜೀವನ ಪದ್ದತಿಯಾಗಿರುವ ಭತ್ತದ ಕೃಷಿ ಹಾಗೂ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಂತೆ ಗಣ್ಯರು ಕರೆ ನೀಡಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅವಂದೂರಿನ ಶ್ರೀ ಗೋಪಾಲಕೃಷ್ಣ ಯುವ ಸಂಘ ಹಾಗೂ ಚಾರಿಟೇಬಲ್ ಟ್ರಸ್ಟ್‍ನ ಸಹಯೋಗದೊಂದಿಗೆ ಕಾಳೇರಮ್ಮನ ಅಯ್ಯಣ್ಣ ಅವರ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ಕೆಸರು ಗದ್ದೆ ಕ್ರೀಡೋತ್ಸವ ಹಾಗೂ ಸಾಂಪ್ರದಾಯಿಕ ನಾಟಿ ಓಟದ ಸಭಾ ಕಾರ್ಯಕ್ರಮವನ್ನು ಶಾಸಕ ಕೊಂಬಾರನ ಬೋಪಯ್ಯ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಹಿಂದೆ ಜುಲೈ, ಆಗಸ್ಟ್ ತಿಂಗಳಲ್ಲಿ ಗದ್ದೆಯಲ್ಲಿಯೇ ಕೆಲಸ, ಈಗಿನ ಪರಿಸ್ಥಿತಿ ಹೇಗಾಗಿದೆಯೆಂದರೆ ಗದ್ದೆ ಮಾಡುವದನ್ನೇ ಕೈಬಿಟ್ಟಿದ್ದೇವೆ. ಇದು ಆಗಬಾರದು, ಗದ್ದೆಯಲ್ಲಿ 6 ತಿಂಗಳು ನೀರು ಇಂಗಿರುತ್ತದೆ, ಈಗ 500ಅಡಿ ಕೊರೆದರೂ ನೀರು ಸಿಗುತ್ತಿಲ್ಲ, ಗದ್ದೆ ನೆಡದಿರುವದೇ ಇದಕ್ಕೆ ಕಾರಣವೆಂದು ಹೇಳಿದರು. ಕಂಪ್ಯೂಟರ್ ಯುಗದಲ್ಲಿ ಎಲ್ಲವೂ ಲಾಭದ ಲೆಕ್ಕಾಚಾರವಾಗಿದೆ, ಗದ್ದೆಯಿಂದ ಲಾಭವಿಲ್ಲವೆಂಬ ಭಾವನೆ ಬಂದಿದೆ, ಆದರೆ ಕೃಷಿಯಲ್ಲಿ ಯಾಂತ್ರೀಕತೆ ಆರಂಭಗೊಂಡಿದ್ದು, ಇದರ ಸದುಪಯೋಗಪಡಿಸಿಕೊಂಡು ಕೃಷಿ ಮಾಡಿದರೆ ಲಾಭವಿದೆ ಎಂದು ಹೇಳಿದರು. ಪ್ರಸ್ತುತ ಕೆಲವು ಸಂಘ ಸಂಸ್ಥೆಗಳು ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸಲು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯವೆಂದರು. ನಮ್ಮತನವನ್ನು ಉಳಿಸಿಕೊಳ್ಳಬೇಕು, ಇತರರಿಗೆ ಪೈಪೋಟಿ ನೀಡದೆ ಮಾದರಿ ಯಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಸಂಸ್ಕøತಿಯನ್ನು ಬೆಳೆಸಬೇಕೆಂದರು.