ಕೂಡಿಗೆ, ಅ. 28: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಸಮೀಪವಿರುವ ಗಂಧದ ಹಾಡಿಯ (ಗಿರಿಜನ ಹಾಡಿ) ಕುಟುಂಬದವರಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಯಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬೋರ್ ವೆಲ್ ಕೊರೆಸಿ ಮೂರು ವರ್ಷಗಳು ಕಳೆದರೂ, ಬೋರ್‍ವೆಲ್‍ಗೆ ವಿದ್ಯುದೀಕರಣಗೊಳಿಸಿ ಚಿಕ್ಕ ಟ್ಯಾಂಕ್‍ಗಳನ್ನು ನಿರ್ಮಾಣ ಮಾಡಿ ಪೈಪ್‍ಲೈನ್ ಅಳವಡಿಸಿದರೂ ಹಾಡಿಯ ಜನರಿಗೆ ಕುಡಿಯುವ ನೀರು ಇದುವರೆಗೂ ತಲಪದಂತಾಗಿದೆ ಎಂದು ಹಾಡಿಯ ಪ್ರಮುಖರಾದ ಬೈರ, ರವಿ, ಕಿರಣ್ ದೂರಿದ್ದಾರೆ.

ಇಲಾಖೆಯ ವತಿಯಿಂದ 2014-15ನೇ ಸಾಲಿನಲ್ಲಿ ಗಂಧದ ಹಾಡಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು (ರಸ್ತೆ ಮತ್ತು ಕುಡಿಯುವ ನೀರು ಒದಗಿಸುವದು) ಅಂದಾಜು ಮೊತ್ತದಂತೆ ರೂ. 13 ಲಕ್ಷಗಳನ್ನು ಈ ಕಾಮಗಾರಿಗೆ ಖರ್ಚು ಮಾಡಿ ಗುತ್ತಿಗೆದಾರರಿಗೆ ಹಣವನ್ನು ಸಂದಾಯ ಮಾಡಲಾಗಿದೆ. ಆದರೆ, ಇದುವರೆಗೂ ನೀರು ಇಲ್ಲದಂತಾಗಿದ್ದು, ಕುಡಿಯುವ ನೀರಿಗಾಗಿ ಹಾಡಿಯ ಜನರು ಪಕ್ಕದಲ್ಲಿ ಹರಿಯುತ್ತಿರುವ ಹಾರಂಗಿ ಉಪನಾಲೆಯ ಮಣ್ಣು ಮಿಶ್ರಿತ ನೀರನ್ನು ಅವಲಂಬಿಸಿದ್ದಾರೆ. ಇದಕ್ಕೆ ಸಂಬಂಧಿಸಿ ದಂತೆ ಅನೇಕ ಬಾರಿ ಇಲಾಖೆಯವರಿಗೆ ತಿಳಿಸಿದರೂ ಯಾವದೇ ಕ್ರಮ ಕೈಗೊಳ್ಳದೆ ನೆಪ ಮಾತ್ರಕ್ಕೆ ಅಧಿಕಾರಿಗಳು ಬಂದು ಭರವಸೆಗಳನ್ನೇ ನೀಡಿ ತೆರಳುತ್ತಿದ್ದಾರೆ ಎಂದು ಹಾಡಿಯ ವಯೋವೃದ್ಧೆ ಭೋಜಮ್ಮ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯು ಗ್ರಾಮ ಪಂಚಾಯಿತಿಯ ಗಮನಕ್ಕೆ ತರದೆ, ಮನಬಂದಂತೆ ಜಾಗ ಗುರುತಿಸಿ ಬೋರ್‍ವೆಲ್ ತೆಗೆಸಿದ್ದಾರೆ. ಆದರೆ ನೀರು ಇದುವರೆಗೂ ಪೈಪ್‍ಗಳ ಮೂಲಕ ಹರಿಯುತ್ತಿಲ್ಲ. ಆದರೂ ಪೈಪ್‍ಲೈನ್ ಮತ್ತು ಟ್ಯಾಂಕ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಹಾಡಿಗೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ ಎಂದರು.

- ಕೆ.ಕೆ. ನಾಗರಾಜ ಶೆಟ್ಟಿ.