ಮಡಿಕೇರಿ, ಜೂ. 12 : ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ದುಡಿಸಿಕೊಳ್ಳುವದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಪ್ರಯತ್ನಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಾಸ್ಟರ್ ಆರ್‍ಕೆಜಿಎಂಎಂ ಮಹಾ ಸ್ವಾಮೀಜಿ ಕರೆ ನೀಡಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ವಕೀಲರ ಸಂಘ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ, ನಗರಸಭೆ ಮತ್ತು ಒ.ಡಿ.ಪಿ. ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯ ಕುರಿತು ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಶಿಕ್ಷಣ ನೀಡುವ ಪ್ರಯತ್ನ ಮಾಡಬೇಕೇ ಹೊರತು ಕೆಲಸ ನೀಡಬಾರದು. 14 ವರ್ಷದೊಳಗಿನ ಮಕ್ಕಳನ್ನು ದುಡಿಸಿ ಕೊಳ್ಳುವದು ಅಪರಾಧವಾಗಿದ್ದು, ದುಡಿಸಿಕೊಳ್ಳುವವರು ದಂಡ ಮತ್ತು ಜೈಲು ವಾಸಕ್ಕೆ ಗುರಿಯಾಗಬೇಕಾಗುತ್ತದೆ.

ದೇಶದಲ್ಲಿ ಬಾಲ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಯಲ್ಲಿದ್ದರೂ ಈ ಪದ್ಧತಿ ಚಾಲ್ತಿಯಲ್ಲಿರುವದು ವಿಷಾದಕರವೆಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಒಂದನೆÉೀ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ಪವನೇಶ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವದು ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪ್ರತಿಯೊಬ್ಬರು ಪ್ರಯತ್ನಿಸಬೇಕೆಂದ ಅವರು, ಶಿಕ್ಷಣವನ್ನು ನೀಡಲು ಎಲ್ಲರು ಕೈಜೋಡಿಸಬೇಕೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಜನ ಜಾಗೃತಿ ಮೂಡಿಸುವ ಅಗತ್ಯವಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಅಸಹಾಯಕರಾಗಿ ದುಡಿಯುತ್ತಿರುವ ಮಕ್ಕಳನ್ನು ಸುರಕ್ಷಿತ ನೆಲೆಗೆ ಕರೆದೊಯ್ಯುವ ಕುರಿತು ಪೊಲೀಸ್ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮಕ್ಕಳನ್ನು ದುಡಿಮೆಯಿಂದ ಮುಕ್ತಗೊಳಿಸಲು ಸಾರ್ವಜನಿಕರು ಪೊಲೀಸರ ಸಹಕಾರ ಪಡೆಯಬಹುದೆಂದು ತಿಳಿಸಿದರು.

ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರು ಪಣತೊಡಬೇಕೆಂದು ಹೇಳಿದರು.

ಉಪವಿಭಾಗಾಧಿಕಾರಿ ನಂಜುಂಡೇಗೌಡ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಕಾರ್ಮಿಕ ಇಲಾಖೆಯ ಅಧಿಕಾರಿ ಮಹದೇವಸ್ವಾಮಿ, ಓಡಿಪಿ ಸಂಸ್ಥೆಯ ಜಾಯ್ಸ್ ಮಿನೇಜಸ್, ವಕೀಲರಾದ ಕೆ.ಎಂ. ಕುಂಞÂ ಅಬ್ದುಲ್ಲ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.