ಮಡಿಕೇರಿ ಜೂ. 9: ರಾಜಕೀಯ ಪಕ್ಷವೊಂದನ್ನು ಅಧಿಕಾರಕ್ಕೇರಿಸಲು ‘ದೇವಟ್ ಪರಂಬು’ ವಿಚಾರದಲ್ಲಿ ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಜಿಲ್ಲೆಯ ಸೌಹಾರ್ದತೆಗೆ ಧಕ್ಕೆ ತಂದು ಅಶಾಂತಿ ಮೂಡಿಸುವವರ ಬಗ್ಗೆ ಜಾಗೃತರಾಗುವಂತೆ ಮನವಿ ಮಾಡಿದ್ದಾರೆ. ಟಿಪ್ಪು ಮತ್ತು ಫ್ರೆಂಚ್ ಮಿತ್ರಪಡೆ 1785ರ ಡಿಸೆಂಬರ್ 13 ರಂದು ಹಿಂದೂಗಳನ್ನು ಜೌತಣಕೂಟಕ್ಕೆಂದು ದೇವಟ್ ಪರಂಬುಗೆ ಆಮಂತ್ರಿಸಿ ನಂಬಿಕೆ ದ್ರೋಹ ಬಗೆದು ಕ್ರೂರವಾಗಿ ಹತ್ಯೆ ಮಾಡಲಾಗಿರುವ ಘಟನೆ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಘಟನೆ ನಡೆದು 230 ವರ್ಷಗಳ ನಂತರ ದೇವಟ್ ಪರಂಬು ವಿಚಾರ ಇದೀಗ ವಿವಾದವಾಗಿ ಮಾರ್ಪಾಡಾಗಿರುವದರ ಹಿಂದೆ ಭಾರೀ ಷಡ್ಯಂತ್ರವಿದೆ ಎಂದು ರವಿ ಕುಶಾಲಪ್ಪ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನಲ್ಲಿ ಹಿಂದೂಗಳೆಲ್ಲರೂ ಅನ್ಯೋನ್ಯತೆಯಿಂದ, ಸಹೋದರತೆಯಿಂದ ಬಾಳುತ್ತಿದ್ದು, ಜಾತಿ ವ್ಯವಸ್ಥೆಯನ್ನು ಮೀರಿದ ಸ್ನೇಹ ಬಾಳ್ವೆ ನಮಗೆಲ್ಲರಿಗೂ ರಕ್ತಗತವಾಗಿದೆ. ಪ್ರಸ್ತುತ ದೇವಟ್ ಪರಂಬು ವಿಚಾರ ಬೆಂಕಿಗೆ ತುಪ್ಪ ಸುರಿದು ಚಳಿಕಾಯಿಸಿ ವಿಕೃತ ಆನಂದ ಪಡುವ ಮನೋಸ್ಥಿತಿಯ ಕೆಲವು ಕಾಣದ ಕೈಗಳಿಂದಾಗಿ ವಿವಾದವಾಗಿ ಮಾರ್ಪಟ್ಟಿದೆ. ಕೊಡಗಿನಲ್ಲಿ ಜನರನ್ನು ಜಾತಿ ಹೆಸರಿನಲ್ಲಿ ವಿಭಜಿಸುವ ಕುತಂತ್ರ ಎಂದಿಗೂ ಫಲಿಸುವದಿಲ್ಲ. ಎಲ್ಲಾ ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಲು ಸಾಧ್ಯವಿದ್ದು, ಅತೀ ಶೀಘ್ರ ಈ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಗಳು ನಡೆಯುತ್ತಿದೆ. ಯಾರೂ ಕೂಡ ಪ್ರಚೋದನೆಗಳಿಗೆ ಕಿವಿಗೊಡದೆ, ಪ್ರತ್ಯೇಕ ಸಭೆಗಳನ್ನು ನಡೆಸದೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಪುಣ್ಯಕ್ಷೇತ್ರ ತಲಕಾವೇರಿಯ ತೀರ್ಥೋದ್ಭವದ ಬಗ್ಗೆ ಮತ್ತು ದೇವರಿಗೆ ಪ್ರಾಣಿ ಹರಕೆ ಅರ್ಪಿಸುವದರ ಬಗ್ಗೆ ವಿವಾದವೆಬ್ಬಿಸುವವರು, ಆರ್‍ಟಿಐ ಹೋರಾಟದ ಹೆಸರಿನಲ್ಲಿ ದಂಧೆ ನಡೆಸುವವರು, ಸಮಾಜ ಘಾತುಕ ಸಂಘಟನೆಗಳ ಮುಖಂಡರುಗಳು ಒಟ್ಟು ಸೇರಿಕೊಂಡು ರಾಷ್ಟ್ರಭಕ್ತಿ, ಹಿಂದುತ್ವ ಹಾಗೂ ಹಿಂದೂ ಸಂಪ್ರದಾಯವನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ. ಆ ಮೂಲಕ ಹಲವು ವರ್ಷಗಳಿಂದ ಕೊಡಗಿನಲ್ಲಿ ಅಧಿಕಾರವಿಲ್ಲದೆ ಪರಿತಪಿಸುತ್ತಿರುವ ರಾಜಕೀಯ ಪಕ್ಷವೊಂದನ್ನು ಅಧಿಕಾರಕ್ಕೆ ತರಲು ಪ್ರಯತ್ನ ನಡೆಸುತ್ತಿದ್ದಾರೆ. ಇದರ ಗುತ್ತಿಗೆ ಪಡೆದಿರುವವರು ಮುಂದಿನ ಭಾಗವಾಗಿ ದೇವಟ್ ಪರಂಬು ವಿವಾದವನ್ನು ಸೃಷ್ಟಿಸಿದ್ದಾರೆ ಎಂದು ರವಿ ಕುಶಾಲಪ್ಪ ಆರೋಪಿಸಿದ್ದಾರೆ.

ಅಂದು ಟಿಪ್ಪು ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಹತ್ಯಾಕಾಂಡ ನಡೆಸಿದರೆ, ಇಂದು ಅಧಿಕಾರ, ಹಣದ ಲಾಲಸೆಗಾಗಿ ಸೌಹಾರ್ದತೆಯ ಹತ್ಯೆ ನಡೆಯುತ್ತಿರುವದು ಕಳವಳಕಾರಿ ಬೆಳವಣಿಗೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸೂದನ ಈರಪ್ಪ ಹಾಗೂ ಎಂ.ಬಿ. ದೇವಯ್ಯ ಅವರುಗಳು ಸಮಸ್ಯೆ ಪರಿಹಾರಕ್ಕಾಗಿ ನಡೆಸುತ್ತಿರುವ ಪ್ರಯತ್ನಗಳು ಹಿಂದೂ ಸಮಾಜಕ್ಕೆ ಮಾದರಿಯಾಗಿದ್ದು, ತಾನು ಕೂಡ ಕೊಡಗಿನ ವಿವಿಧ ಜನಾಂಗದ ಪ್ರಮುಖರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ ಪ್ರೀತಿಯಿಂದ, ಸಹಬಾಳ್ವೆಯಿಂದ ಬದುಕು ಸಾಗಿಸುವ ಮೂಲಕ ಜಿಲ್ಲೆಯಲ್ಲಿ ಒಗ್ಗಟ್ಟನ್ನು ಮೂಡಿಸುವ ಅಗತ್ಯವಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ರವಿ ಕುಶಾಲಪ್ಪ ಮನವಿ ಮಾಡಿದ್ದಾರೆ.