ಮಡಿಕೇರಿ, ಜು. 18: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ತಮಾನ ವರದಿ ದಾಖಲಿಸುವಂತೆ ಇಲ್ಲಿನ ಪ್ರಧಾನ ಸಿವಿಲ್ ಜಡ್ಜ್ ಜೆಎಂಎಫ್‍ಸಿ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ. ಗಣಪತಿ ಅವರ ಪುತ್ರ ನೇಹಾಲ್ ಗಣಪತಿ ಸಲ್ಲಿಸಿದ್ದ ದೂರು ಅರ್ಜಿ ಆಧಾರದಲ್ಲಿ ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಮಾಧ್ಯಮಗಳಲ್ಲಿ ನೀಡಿದ್ದ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಸಚಿವ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಮತ್ತು ಎ.ಎಂ. ಪ್ರಸಾದ್ ಅವರುಗಳ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲಿಸುವಂತೆ ನ್ಯಾಯಾಧೀಶರಾದ ಅನ್ನಪೂರ್ಣೇಶ್ವರಿ ಅವರು ಮಹತ್ವದ ತೀರ್ಪು ನೀಡಿದ್ದಾರೆ.

ಕಳೆದ ತಾ. 7ರಂದು ಡಿವೈಎಸ್ಪಿ ಗಣಪತಿ ಅವರು ಮಡಿಕೇರಿಯ ವಿನಾಯಕ ಲಾಡ್ಜ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದಕ್ಕೂ ಮುನ್ನ ಅವರು ಸ್ಥಳೀಯ ಸುದ್ದಿವಾಹಿನಿ ಕಚೇರಿಗೆ ತೆರಳಿ ತಾವು ಇಲಾಖೆಯಲ್ಲಿ ಅನುಭವಿಸುತ್ತಿರುವ ಕಿರುಕುಳವನ್ನು ತೋಡಿಕೊಂಡಿದ್ದರಲ್ಲದೆ, ತನಗೆ ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾಗಿದ್ದ ಪ್ರಣಬ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರುಗಳು ಕಿರುಕುಳ ನೀಡುತ್ತಿದ್ದುದಾಗಿ ಹೇಳಿಕೊಂಡಿದ್ದರು. ತನಗೇನಾದರೂ ಆದರೆ ಅದಕ್ಕೆ ಈ ಮೂವರೇ ಕಾರಣರು ಎಂದು ಹೇಳಿದ್ದರು. ಆದರೆ, ಮಡಿಕೇರಿ ನಗರ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಮೃತ ಗಣಪತಿಯವರ ಪತ್ನಿ ಪವನ್, ಪುತ್ರ ನೇಹಾಲ್ ಗಣಪತಿ ಹಾಗೂ ಕುಟುಂಬಸ್ಥರು ತಾ. 10ರಂದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಮೂವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದರು, ಆದರೆ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಯುತ್ತಿರುವದರಿಂದ ಮೊಕದ್ದಮೆ ದಾಖಲಿಸಲು ಸಾಧ್ಯವಿಲ್ಲವೆಂದು ಕುಶಾಲನಗರ ಠಾಣಾಧಿಕಾರಿ ಲಿಖಿತವಾಗಿ ನೀಡಿದ್ದರು.ಖಾಸಗಿ ದೂರು ದಾಖಲು ಈ ಹಿನ್ನೆಲೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ,ನೇತೃತ್ವದಲ್ಲಿ ತಾ. 11ರಂದು ಇಲ್ಲಿನ ನ್ಯಾಯಾಲಯದಲ್ಲಿ ಪುತ್ರ ನೇಹಾಲ್ ಗಣಪತಿ ವೀರಾಜಪೇಟೆಯ

ವಕೀಲ ಅಮೃತ್ ಸೋಮಯ್ಯ ಖಾಸಗಿ ದೂರು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆ 306/ಖW34ರಂತೆ ಮೂವರ ವಿರುದ್ಧ ಮೊಕದ್ದಮೆ ದಾಖಲಿಸಲು ಪೊಲೀಸರಿಗೆ ಸೂಚಿಸುವಂತೆ ಕೋರಿದ್ದರು. ದೂರಿನಲ್ಲಿ ಗಣಪತಿ ಅವರ ಪತ್ನಿ ಕೆ.ಕೆ. ಪವನ್, ಸಹೋದರ ಎಂ.ಕೆ. ಮಾಚಯ್ಯ ಹಾಗೂ ಮಾಧ್ಯಮ ಪ್ರತಿನಿಧಿ ಗೋಪಾಲ್ ಸೋಮಯ್ಯ ಅವರುಗಳು ಸಾಕ್ಷಿಗಳಾಗಿದ್ದರು. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ತಾ. 18ಕ್ಕೆ ನಿಗದಿಪಡಿಸಿತ್ತು.ವಿಚಾರಣೆ ಅದರಂತೆ ಇಂದು ಹೈಕೋರ್ಟ್ ವಕೀಲ ಎಂ.ಟಿ. ಸೋಮಯ್ಯ, ಅಮೃತ್ ಸೋಮಯ್ಯ ಅವರೊಂದಿಗೆ ಪುತ್ರ ನೇಹಾಲ್ ಗಣಪತಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮಧ್ಯಾಹ್ನ 12 ಗಂಟೆಗೆ ಅನ್ನಪೂರ್ಣೇಶ್ವರಿ ಅವರು ವಿಚಾರಣೆ ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ವಕೀಲರು ದೂರುದಾರರ ಪರವಾಗಿ ಅಫಿಡವಿಟ್ ಸಲ್ಲಿಸಲು ಅವಕಾಶ ನೀಡಬೇಕಾಗಿ ಕೋರಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವೇಳೆ ದೂರುದಾರರ ಮೇಲೆ ಒತ್ತಡ ಉಂಟಾಗಿ ದೂರನ್ನು ವಾಪಸ್ ಪಡೆದುಕೊಳ್ಳಲು ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದರು. ಈ ಸಂಬಂಧ 2015ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಅರ್ಧ ಗಂಟೆಗಳ ಕಾಲ ಅವಕಾಶ ನೀಡಿದರು. ನಂತರ ದೂರುದಾರ ನೇಹಾಲ್ ಗಣಪತಿ ಹೆಸರಿನಲ್ಲಿ ತಾನು ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳು ಸತ್ಯವಾಗಿರುವದಾಗಿ ಅಫಿಡವಿಟ್ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯಾಧೀಶರು ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಮೊಕದ್ದಮೆಗೆ ಆದೇಶ

ಮತ್ತೆ ಮಧ್ಯಾಹ್ನ 3.30ಕ್ಕೆ ಕಲಾಪ ಆರಂಭಗೊಂಡಿತು. 3.45ರ ವೇಳೆಗೆ ನೇಹಾಲ್ ಗಣಪತಿ ಅವರ ದೂರು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು ಪ್ರಕರಣದ ಬಗ್ಗೆ ಪ್ರಥಮ ವರ್ತಮಾನ ವರದಿ ದಾಖಲಿಸುವಂತೆ ತೀರ್ಪು ನೀಡಿದರು.

ಸೆಕ್ಷನ್ 156/3ರ ಅಡಿ ದೂರಿನಲ್ಲಿ ದಾಖಲಿಸಿರುವ ಸಚಿವ ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ, ಎ.ಎಂ. ಪ್ರಸಾದ್ ಅವರುಗಳ ಮೇಲೆ ಮೊಕದ್ದಮೆ ದಾಖಲಿಸುವಂತೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಆದೇಶಿಸಿದರು. ಅಲ್ಲದೆ ಈ ಬಗ್ಗೆ ಆಗಸ್ಟ್ 5ರೊಳಗಡೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಪೊಲೀಸರು ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೊಕದ್ದಮೆ ದಾಖಲಿಸಿ ಸೆಕ್ಷನ್ 306ರಡಿ ಮುಂದಿನ ತನಿಖೆ ಕೈಗೊಳ್ಳಬಹುದಾಗಿದೆ.

ಬಂಧಿಸುವ ಅವಕಾಶ

ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಮೊಕದ್ದಮೆ ದಾಖಲಾಗಿರುವದರಿಂದ ಈ ಸಂಬಂಧ ಸಚಿವ ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರುಗಳನ್ನು ಬಂಧಿಸಲು ಕೂಡ ಅವಕಾಶವಿದೆ. ಇತರ ಪ್ರಕರಣಗಳಲ್ಲಾದರೆ ಸಚಿವರನ್ನು ಬಂಧಿಸಲು ಸಭಾಧ್ಯಕ್ಷರ ಅನುಮತಿ ಹಾಗೂ ಹಿರಿಯ ಅಧಿಕಾರಿಗಳನ್ನು ಬಂಧಿಸಲು ಮೇಲಧಿಕಾರಿಗಳ ಅನುಮತಿ ಅವಶ್ಯವಾಗಿರುತ್ತದೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವದೇ ಅನುಮತಿಯ ಅಗತ್ಯತೆ ಇರುವದಿಲ್ಲ. ವೃತ್ತ ನಿರೀಕ್ಷಕರು ಹಾಗೂ ಡಿವೈಎಸ್ಪಿ ಅವರುಗಳು ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಲಿದ್ದು, ನೇರ ಬಂಧಿಸುವ ಅವಕಾಶವಿದೆ. ಬಂಧಿಸದೆ ತನಿಖೆ ನಡೆಸಲೂಬಹುದೆಂದು ಹಿರಿಯ ವಕೀಲ ಎಂ.ಟಿ. ನಾಣಯ್ಯ ಸ್ಪಷ್ಟಪಡಿಸಿದರು.

ಆಹೋರಾತ್ರಿ ಪ್ರತಿಭಟನೆ

ಗಣಪತಿ ಸಾವಿಗೆ ನ್ಯಾಯ ಒದಗಿಸುವಂತೆ, ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ, ಸಚಿವ ಜಾರ್ಜ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಆತ್ಮಹತ್ಯೆ ಮಾಡಿಕೊಂಡ ಮರು ದಿನದಿಂದಲೇ ಬಿಜೆಪಿ, ಸಂಘ- ಪರಿವಾರದವರು, ಜೆಡಿಎಸ್, ವಿವಿಧ ಸಂಘ - ಸಂಸ್ಥೆಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ವಿಧಾನ ಸೌಧದ ಒಳಗೆ ಹೊರಗೆ ನಿರಂತರ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದಾರೆ. ವಿಪಕ್ಷ ಹಾಗೂ ಜೆಡಿಎಸ್ ಶಾಸಕರುಗಳು ಸದನದಲ್ಲಿ ಆಹೋರಾತ್ರಿ ಧರಣಿ ನಡೆಸಿದರೆ, ಇತ್ತ ಕೊಡಗು ಬಂದ್ ಆಚರಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಲಾಗಿತ್ತು. ವಿವಿಧ ಸಂಘಟನೆಗಳು ಮಡಿಕೇರಿಯಲ್ಲಿ ಪಂಜಿನ ಮೆರವಣಿಗೆ ಕೂಡ ನಡೆಸಿದ್ದರು. ಆದರೂ ಸರಕಾರ ಮಾತ್ರ ಜಗ್ಗದೆ ವಿಚಾರಣೆಯನ್ನು ಸಿಐಡಿಗೆ ವಹಿಸಿತ್ತು. ಆದರೆ ಸಿಬಿಐಗೆ ವಹಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದಂತೆ ನ್ಯಾಯಾಂಗ ತನಿಖೆಗೆ ಒಳಪಡಿಸಿತ್ತು.

ನ್ಯಾಯ ಸಿಕ್ಕಿದೆ - ಸಂಕೇತ್

ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವ ದಲ್ಲಿ ನಡೆಸಿದ ಹೋರಾಟದ ಹಿನ್ನೆಲೆಯಲ್ಲಿ ಗಣಪತಿ ಅವರ ಸಾವಿಗೆ ನ್ಯಾಯ ಸಿಕ್ಕಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಿಸಿದರು. ನ್ಯಾಯಾಲಯದ ಆದೇಶ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ದೊಡ್ಡ ಹೆಜ್ಜೆಯಾಗಿದೆ. ಗಣಪತಿ ಅವರ ಕುಟುಂಬಕ್ಕೆ ನ್ಯಾಯ ಸಿಕ್ಕಿದಂತಾಗಿದೆ. ಸಂಪೂರ್ಣ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವದು. ಈ ಒಂದು ಹೋರಾಟದಲ್ಲಿ ಹಿರಿಯ ವಕೀಲ ಎಂ.ಟಿ. ನಾಣಯ್ಯ ಹಾಗೂ ವಕೀಲ ಅಮೃತ್ ಸೋಮಯ್ಯ ಅವರುಗಳ ಕಾರ್ಯವನ್ನು ಶ್ಲಾಘಿಸುವದಾಗಿ ಹೇಳಿದರು.

ನ್ಯಾಯದ ಮುಂದೆ ದೊಡ್ಡವರಿಲ್ಲ - ನಾಚಪ್ಪ

ನ್ಯಾಯ ದೇವತೆಯ ಮುಂದೆ ಯಾರೂ ಕೂಡ ದೊಡ್ಡವರಲ್ಲ, ಎಲ್ಲರೂ ತಲೆ ಬಾಗಲೇಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಹೇಳಿದ್ದಾರೆ. ನ್ಯಾಯದ ಎದುರು ಹಣ, ಅಧಿಕಾರದ ಬಲ ನಡೆಯುವದಿಲ್ಲವೆಂಬದು ಸಾಬೀತಾಗಿದೆ. ನ್ಯಾಯದ ಪರ ತೀರ್ಪು ನೀಡಿದ್ದಾರೆ. ಲಘುವಾಗಿ ಪರಿಗಣನೆ ಮಾಡಬಾರದು. ಗಣಪತಿ ಕುಟುಂಬಕ್ಕೆ ನ್ಯಾಯ, ಶಾಂತಿ ಸಿಗಲಿ, ಅಲ್ಲದೆ ರಾಜ್ಯದ ಜನತೆಗೆ ಇದು ಗೊತ್ತಾಗಬೇಕೆಂದು ಹೇಳಿದರು.

ಹೋರಾಟಕ್ಕೆ ಸಂದ ಜಯ - ಭಟ್

ಜನರ ನ್ಯಾಯಪರ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ಹೋರಾಟಗಾರ, ಹಿತರಕ್ಷಣಾ ಸಮಿತಿಯ ಪದಾಧಿಕಾರಿ ಪ್ರಸನ್ನಭಟ್ ಹೇಳಿದರು. ಕಳೆದ ಹನ್ನೊಂದು ದಿನಗಳಿಂದ ನಿರಂತರ ಹೋರಾಟ ಮಾಡಿದ್ದಕ್ಕೆ ಪ್ರತಿಫಲ ದೊರೆತಂತಾಗಿದೆ. ಸೂಕ್ತ ತನಿಖೆಯೊಂದಿಗೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಸತ್ಯಕ್ಕೆ ಜಯ- ಮನು ಮುತ್ತಪ್ಪ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸತ್ಯಕ್ಕೆ ಜಯ ದೊರೆತಿದೆ. ಸಚಿವ ಜಾರ್ಜ್ ಅವರನ್ನು ತಕ್ಷಣ ಬಂಧಿಸಬೇಕು. ಸ್ವತಃ ಮುಖ್ಯಮಂತ್ರಿಗಳು ವಕೀಲರಾಗಿದ್ದು, ನಿಜಾಂಶ ತಿಳಿದಿದ್ದರೂ ಪ್ರಕರಣವನ್ನು ತಿರುಚುವ ಷಡ್ಯಂತ್ರ ಮಾಡಿದ್ದಾರೆ. ರಾಜ್ಯ ಸರ್ಕಾರದ ಕಾರ್ಯ ವೈಖರಿಯಿಂದ ರಾಜ್ಯದ 6 ಕೋಟಿ ಜನ ತಲೆ ತಗ್ಗಿಸುವಂತೆ ಮಾಡಿದ್ದಲ್ಲದೆ ಮುಖ್ಯಮಂತ್ರಿಗಳಿಗೆ ತೀವ್ರ ಮುಖಭಂಗವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಕೆ. ಮನುಮುತ್ತಪ್ಪ ಹೇಳಿದರು.

ಜನತೆಗೆ ಸಿಕ್ಕ ಜಯ - ಉಪಾಧ್ಯಾಯ

ಜಿಲ್ಲಾ ನ್ಯಾಯಾಲಯ ಸಚಿವ ಕೆ.ಜೆ.ಜಾರ್ಜ್ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಆದೇಶ ನೀಡಿದ್ದು, ಇದು ಗಣಪತಿ ಅವರ ಕುಟುಂಬ ವರ್ಗಕ್ಕೆ ಮತ್ತು ರಾಜ್ಯದ ಜನತೆಗೆ ಸಿಕ್ಕ ಜಯವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಅಭಿಪ್ರಾಯಪಟ್ಟಿದ್ದಾರೆ.

ಇಬ್ಬರು ಹಿರಿಯ ಅಧಿಕಾರಿ ಗಳನ್ನು ತಕ್ಷಣ ಅಮಾನತು ಗೊಳಿಸಬೇಕೆಂದು ಆಗ್ರಹಿಸಿರುವ ಅವರು, ಇದು ಬಿಜೆಪಿ ಮತ್ತು ರಾಜ್ಯದ ಜನತೆಯ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಪತ್ರಕರ್ತರು ಕೂಡ ಸತ್ಯವನ್ನು ಬಯಲಿಗೆಳೆಯು ವದಕ್ಕಾಗಿ ನಿರಂತರ ಪ್ರಯತ್ನವನ್ನು ನಡೆಸುತ್ತಿದ್ದು, ಇದನ್ನು ಬಿಜೆಪಿ ಗೌರವಿಸಲಿದೆ ಎಂದಿದ್ದಾರೆ.