ಮಡಿಕೇರಿ, ಅ.28 : ಕೊಡಗಿನ ಜನರ ವಿರೋಧದ ನಡುವೆಯೂ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವ ರಾಜ್ಯ ಸರಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ಜಯಂತಿ ಆಚರಣೆಯನ್ನು ಕೈಬಿಡಬೇಕೆಂದು ಜಿಲ್ಲಾ ಬಿಜೆಪಿಯ ಪ್ರಜ್ಞಾವಂತ ಸ್ವಾಭಿಮಾನಿ ಮಹಿಳಾ ಬಣ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ನ.10 ರಂದು ಜಿಲ್ಲೆಯಾದ್ಯಂತ ಮನೆ ಮನೆಗಳಲ್ಲಿ ಕಪ್ಪು ಬಾವುಟ ಹಾರಿಸುವ ಮೂಲಕ ಜಯಂತಿ ಆಚರಣೆಯನ್ನು ವಿರೋಧಿಸುವದಾಗಿ ಹೇಳಿದರು.

ಜಿಲ್ಲೆಯಲ್ಲಿ ಹಿಂದೂ ಹಾಗೂ ಮುಸಲ್ಮಾನರು ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಿದ್ದು, ಪರಸ್ಪರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಆದರೆ ಮುಸಲ್ಮಾನರು ಮನವಿ ಸಲ್ಲಿಸದಿದ್ದರೂ ಕಳೆದ ವರ್ಷ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸುವ ಕಾರ್ಯ ಮಾಡಿದೆ. ಸರಕಾರದ ಈ ತಪ್ಪು ನಿರ್ಧಾರದಿಂದಲೇ ಕೊಡಗಿನ ಕಾವೇರಿ ಮಾತೆ ಮುನಿಸಿಕೊಂಡು ನದಿ ನೀರಿನ ವಿವಾದ ತೀವ್ರ ಸ್ವರೂಪವನ್ನು ಪಡೆದುಕೊಂಡಿತು ಎಂದು ಕಾಂತಿ ಸತೀಶ್ ಆರೋಪಿಸಿದರು.

ಟಿಪ್ಪು ಜಯಂತಿಯಂತಹ ವಿವಾದಾತ್ಮಕ ಜಯಂತಿಗಳನ್ನು ಆಚರಿಸುವ ಮೂಲಕ ಅಶಾಂತಿಯನ್ನು ಮೂಡಿಸುವ ಬದಲು ಮುಸಲ್ಮಾನರ ಏಳಿಗೆಗಾಗಿ ಸರಕಾರ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳನ್ನು ಅಲ್ಪಸಂಖ್ಯಾತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಿ ಎಂದು ಅವರು ಒತ್ತಾಯಿಸಿದರು. ಶಾದಿಭಾಗ್ಯ ಯೋಜನೆಯ ಲಾಭ ಎಲ್ಲಾ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರಯತ್ನದ ಫಲವಾಗಿ ಸರ್ವ ಶಿಕ್ಷಣ ಅಭಿಯಾನ ಜಾರಿಗೆ ಬಂದಿದ್ದು, ಎಲ್ಲಾ ಅಲ್ಪಸಂಖ್ಯಾತರು ಇಂದು ವಿದ್ಯಾವಂತರಾಗುತ್ತಿದ್ದಾರೆ. ಈ ರೀತಿಯ ಅಭಿವೃದ್ಧಿ ಕಾರ್ಯಗಳ ಮೂಲಕ ಸರಕಾರ ಅಲ್ಪಸಂಖ್ಯಾತರ ಒಲವು ಗಳಿಸಿಕೊಳ್ಳಬೇಕೆ ಹೊರತು ಪ್ರಜ್ಞಾವಂತ ಮುಸಲ್ಮಾನರು ಸೇರಿದಂತೆ ಯಾರಿಗೂ ಬೇಡವಾದ ಟಿಪ್ಪು ಜಯಂತಿ ಆಚರಣೆಯ ಮೂಲಕ ಓಲೈಕೆ ರಾಜಕಾರಣ ಮಾಡಬಾರದೆಂದು ಕಾಂತಿ ಸತೀಶ್ ಒತ್ತಾಯಿಸಿದರು.

ಕೊಡಗಿನ ಜನ ಎಂದಿಗೂ ಮುಸಲ್ಮಾನರ ವಿರೋಧಿಗಳಲ್ಲ, ಡಾ.ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಜಯಂತಿ ಆಚರಿಸಿದರೆ ತಮ್ಮ ಸ್ವಾಗತವಿದೆ. ಆದರೆ ಈಗಾಗಲೇ ದೊರಕಿರುವ ಸಾಕ್ಷ್ಯಾಧಾರಗಳಂತೆ ಟಿಪ್ಪು ಕೊಡಗಿನಲ್ಲಿ ಹತ್ಯಾಕಾಂಡ ನಡೆಸಿರುವದು ಸಾಬೀತಾಗಿದೆ ಎಂದು ಆರೋಪಿಸಿದ ಕಾಂತಿ ಸತೀಶ್ ಇಂತಹ ವ್ಯಕ್ತಿಗಳ ಜಯಂತಿ ಆಚರಣೆ ಅಗತ್ಯವಿಲ್ಲವೆಂದರು. ಟಿಪ್ಪುವಿನಿಂದ ಜಿಲ್ಲೆಯಲ್ಲಾಗಿರುವ ಅನ್ಯಾಯದ ಬಗ್ಗೆ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಮತ್ತು ಜಯಂತಿ ಆಚರಿಸದಂತೆ ಒತ್ತಾಯಿಸಲು ನ.2 ರಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವದೆಂದು ಅವರು ಹೇಳಿದರು. ಇದನ್ನೂ ಮೀರಿ ಸರಕಾರ ಜಯಂತಿಯನ್ನು ಆಚರಿಸಿದರೆ ಮನೆ ಮನೆಗಳಲ್ಲಿ ಕಪ್ಪು ಬಾವುಟ ಹಾರಾಡಲಿದೆ ಎಂದರು. ಚಿತ್ರದುರ್ಗದಲ್ಲಿ ಸುಮಾರು ಎರಡು ಸಾವಿರ ಮಹಿಳೆಯರು ಟಿಪ್ಪು ಜಯಂತಿ ವಿರುದ್ಧ ಒನಕೆ ಹಿಡಿದು ಬೀದಿಗಳಿದು ಹೋರಾಟ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಇದೇ ರೀತಿಯಲ್ಲಿ ಕೊಡಗಿನ ಮಹಿಳೆಯರು ಕೂಡ ಬೀದಿಗಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಕಾಂತಿ ಸತೀಶ್ ಎಚ್ಚರಿಕೆ ನೀಡಿದರು. ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ ಮಾತನಾಡಿ ಟಿಪ್ಪು ಜಯಂತಿ ಆಚರಣೆಗೆ ಸರಕಾರ ಅನುದಾನ ಬಿಡುಗಡೆ ಮಾಡುತ್ತಿರುವದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ರಾಜ್ಯ ಕಾಂಗ್ರೆಸ್ ಸರಕಾರ ಸಮಾಜ ಘಾತುಕ ಶಕ್ತಿಗಳು ನೆಲೆಯೂರಲು ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಉಪಾಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ ರಾಜ್ಯದಲ್ಲಿ ಜಾರಿಯಲ್ಲಿರುವ ಎಲ್ಲಾ ಜಯಂತಿಗಳನ್ನು ರದ್ದು ಮಾಡಬೇಕೆಂದು ಒತ್ತಾಯಿಸಿದರು. ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಅವರು ದುರುದ್ದೇಶಪೂರಿತವಾಗಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುವ ಮೂಲಕ ಜಿಲ್ಲೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಗೀತಾ ಪವಿತ್ರ ಹಾಗೂ ವಿಜು ತಿಮ್ಮಯ್ಯ ಉಪಸ್ಥಿತರಿದ್ದರು.