ನಾಪೆÇೀಕ್ಲು, ಜೂ. 18: ಜಿಲ್ಲಾ ಕಣಿಯರ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಸಮೀಪದ ಕಡಂಗ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ನಾಲ್ಕನೆ ವರ್ಷದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯದಲ್ಲಿ ಅರಮೇರಿ ತಂಡ ಗೆಲುವು ಸಾಧಿಸಿದರೆ, ಕಕ್ಕಬೆ ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು.

ಕ್ರೀಡಾಕೂಟದಲ್ಲಿ ಪುರುಷರಿಗೆ ಕ್ರಿಕೆಟ್, ಓಟದ ಸ್ಪರ್ಧೆ, ಮಹಿಳೆಯರಿಗೆ ಕಣ್ಣು ಕಟ್ಟಿ ಮಡಿಕೆ ಒಡೆಯುವದು, ವಿಷದ ಚೆಂಡು ಸೇರಿದಂತೆ ವಯಸ್ಸಿಗನುಗುಣವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಜನಾಂಗ ಬಾಂಧವರು ಕ್ರೀಡಾಕೂಟದಲ್ಲಿ ಸಂತಸದಿಂದ ಪಾಲ್ಗೊಂಡು ತಮ್ಮ ಜನಾಂದ ಒಗ್ಗಟ್ಟು ಪ್ರದರ್ಶಿಸಿದರು.

ನಂತರ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಚೇಂದುವಂಡ ಅಪ್ಪಯ್ಯ ಮಾತನಾಡಿ, ನಮ್ಮ ಜನಾಂಗದ ಜನಸಂಖ್ಯೆ ಕಡಿಮೆಯಿರುವ ಕಾರಣ ಅದ್ಧೂರಿ ಕಾರ್ಯಕ್ರಮಗಳಿಗೆ ತೊಂದರೆಯಾಗಿದೆ. ಆದರೆ ಮುಂದಿನ ದಿನಗಳಲ್ಲಿ ಜನಾಂಗ ಬಾಂಧವರ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು ಎಂದರು. ಜನಾಂಗದ ಮಕ್ಕಳು ಶೈಕ್ಷಣಿಕವಾಗಿ ಹೆಚ್ಚು ಸಬಲರಾಗುವದರೊಂದಿಗೆ ಉನ್ನತ ಹುದ್ದೆಗಳನ್ನು ಅಲಂಕರಿ ಸುವದರ ಮೂಲಕ ಹೆತ್ತವರಿಗೂ, ಜನಾಂಗಕ್ಕೂ, ದೇಶಕ್ಕೂ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಕಣಿಯಂಡ ಶಾರದ, ಚೆರಿಯಕಂಡ ಕಾರ್ಯಪ್ಪ, ಚೆರಿಯಕಂಡ ವಿಜಯ, ಕಣಿಯಂಡ ಮುತ್ತಕ್ಕಿ, ಮತ್ತಿತರರಿದ್ದರು. ಈ ಸಂದರ್ಭ ಈ ಸಾಲಿನ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ಚೋಂಡಪಂಡ ಮನು ಸ್ವಾಗತಿಸಿ, ಕಣಿಯರ ಪ್ರಕಾಶ್ ವಂದಿಸಿದರು.