ಸಿದ್ದಾಪುರ, ಜೂ. 15: ಸಮೀಪದ ಚೆನ್ನಯ್ಯನಕೋಟೆಯಲ್ಲಿ ಕಾನೂನು ಅರಿವು ಶಿಬಿರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ವೀರಾಜಪೇಟೆ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯುಕ್ತ ಅಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಕಾನೂನು ಅರಿವು ಪಡೆದು ಮುನ್ನಡೆಯಬೇಕೆಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದಲ್ಲಿ ಬಡ ವರ್ಗದ ಮಂದಿ ವಾಸ ಮಾಡುತ್ತಿದ್ದು, ಇವರುಗಳಿಗೆ ಶಾಶ್ವತ ಸೂರು ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ. ಇವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂದು ಮನವಿ ಮಾಡಿದರು.

ವಕೀಲ ಬಿ.ಎಸ್. ಪುಷ್ಪರಾಜ್ ಅರಣ್ಯ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭ ವಕೀಲರ ಸಂಘದ ಅಧ್ಯಕ್ಷ ಕಾಮತ್, ಕಾರ್ಯದರ್ಶಿ ಸುಬ್ಬಯ್ಯ, ವಕೀಲ ಕೆ.ವಿ. ಸುನಿಲ್, ಮಾಜಿ ಜಿ.ಪಂ. ಸದಸ್ಯ ಗಣೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶೀಲ, ಸುಶೀಲ, ಮುಖ್ಯೋಪಾಧ್ಯಾಯಿನಿ ಜಾಜಿ ಮೋಹನ್, ಶಿಕ್ಷಕಿ ಶಿಲ್ಪ, ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.