ಮಡಿಕೇರಿ, ನ. 24: ಗಾಂಧಿ ಮೈದಾನದಲ್ಲಿ ನಡೆದ ಕೊಡವ ನ್ಯಾಷನಲ್ ಡೇ ಸಮಾರಂಭದಲ್ಲಿ ಹಕ್ಕೊತ್ತಾಯಗಳನ್ನು ಮಂಡಿಸಿ ಕೊಡವರನ್ನು ಕುರಿತಾಗಿ ಸುಧೀರ್ಘ ಬಾಷಣ ಮಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಕೊಡವ, ಜನಾಂಗ ಜಾಗೃತರಾಗದಿದ್ದಲ್ಲಿ ಕೊಡವರಿಗೆ ಉಳಿಗಾಲವಿಲ್ಲ ಎಂದು ಅಭಿಪ್ರಾಯಪಟ್ಟರು.

ಕೊಡಗಿನ ಮೂಲ ನಿವಾಸಿ ಗಳಾದ ಕೊಡವರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೊಡವರು ಸಿಎನ್‍ಸಿ ಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಹೋರಾಟಕ್ಕೆಂದು ಕರೆದರೆ, ಅಲ್ಲಿ ಕಪ್ಪೆಯಾಟ್ ಇದೆ, ಬೇರೆ ಕಾರ್ಯಕ್ರಮವಿದೆ ಎಂಬಿತ್ಯಾದಿ ಕಾರಣ ನೀಡಿ ಹಲವರು ಹೋರಾಟ ಕ್ಕಿಳಿಯಲು ಹಿಂಜರಿಯುತ್ತಾರೆ ಇದು ಸರಿಯಲ್ಲ. ಹಕ್ಕಿಗಾಗಿ ಹೋರಾಡದೆ ಕೇವಲ ಕಪ್ಪೆಯಾಟದಲ್ಲೇ ಕಾಲ ಕಳೆದರೆ, ಮುಂದೊಂದು ದಿನ ನಿಮ್ಮನ್ನು ಮೊಸಳೆ ಬಂದು ನುಂಗಿ ಹಾಕುವ ಸಂದರ್ಭ ಬರಲಿದೆ ಎಂದು ನಾಚಪ್ಪ ಎಚ್ಚರಿಸಿದರು.

ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 500 - 1000 ರೂ. ಗಳ ನೋಟನ್ನು ರದ್ದು ಮಾಡಿರುವ ಕ್ರಮವನ್ನು ತಾನು ವೈಯಕ್ತಿಕವಾಗಿ ಸ್ವಾಗತಿಸುತ್ತೇನೆ. ಮೋದಿಯವರ ಕ್ರಮದಿಂದ ತನ್ನ ಮೇಲೆ ಅಕ್ರಮ ಆಸ್ತಿ, ಅಕ್ರಮ ಹಣ ಗಳಿಕೆಯ ಆರೋಪ ಮಾಡಿದವರಿಗೆ ತಕ್ಕ ಉತ್ತರ ಸಿಕ್ಕಂತಾಗಿದ್ದು, ತಾನು ‘ಕ್ಲಿಯರ್’ ಎಂಬದು ಸಾಬೀತಾಗಿದೆ ಎಂದು ನಾಚಪ್ಪ ನುಡಿದರು. ಮಾವೋವಾದಿ ಗಳಿಗೆ ಸಹಕಾರ ನೀಡುತ್ತಾ ಬಂದಿರುವ, ಕೆಲ ಮಂದಿ ತನ್ನನ್ನು ಹಾಗೂ ತನ್ನ ಹೋರಾಟ ವನ್ನು ಹತ್ತಿಕ್ಕಲು ಆರಂಭದಿಂದಲೇ ಪ್ರಯತ್ನಿಸುತ್ತಾ ಬಂದಿದ್ದಾರೆ. ಆದರೆ ತಾನು ತಲೆ ಬಾಗಿಲ್ಲ , ಮುಂದೆ ಬಾಗುವದೂ ಇಲ್ಲ. ನಾಚಪ್ಪನ ಹೋರಾಟ ಕೊಡವ ಜನಾಂಗಕ್ಕಾಗಿ ಹೊರತು ನಾಚಪ್ಪನಿಗಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಕೊಡವ ನ್ಯಾಷನಲ್ ಕೌನ್ಸಿಲ್ ಯಾವದೇ ಜನಾಂಗದ ವಿರೋಧಿಯಲ್ಲ. ಕೊಡವ ಜನಾಂಗದ ಹಕ್ಕಿಗಾಗಿ ಸಿಎನ್‍ಸಿ ಹೋರಾಟ ಹೊರತು ಬೇರಾವದೇ ಉದ್ದೇಶವಿಲ್ಲ ಇತರ ಜನಾಂಗಗಳು ಕೂಡ ಹಕ್ಕನ್ನು ಕೇಳಿ ಪಡೆಯಬ ಹುದಾದ ಅವಕಾಶ ಈ ದೇಶದಲ್ಲಿದ್ದು, ಅದಕ್ಕೆ ಸಿಎನ್‍ಸಿ ಅಡ್ಡಿಪಡಿಸುವದಿಲ್ಲ ಎಂದು ನಾಚಪ್ಪ ನುಡಿದರು. ಕೊಡವರ ಪರವಾಗಿ ಪತ್ರಿಕಾ ಹೇಳಿಕೆ ನೀಡಲು ಹಲವು ಮಂದಿ ಇದ್ದಾರೆ. ಆದರೆ ಸರ್ಕಾರದ ಮಟ್ಟದಲ್ಲಿ ಸಿಎನ್‍ಸಿ ಹೊರತಾಗಿ ಬೇರಾವದೇ ಸಂಘಟನೆ ಗಳು ಹೋರಾಟ ಮಾಡುತ್ತಿಲ್ಲ. ಕಳೆದ 26 ವರ್ಷಗಳಿಂದ ಸಿಎನ್‍ಸಿ ಕಾಯ, ವಾಚಾ, ಮನಸ ಕೊಡವರ ಹಕ್ಕಿಗಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದೆ, ಮುಂದೆಯೂ ಮಾಡಲಿದೆ.

ಈ ದೇಶದ ರಾಷ್ಟ್ರಪತಿಗಳು ಮೂರು ಭಾರಿ ತಮ್ಮ ಬೇಟಿಗೆ ಸಿಎನ್‍ಸಿ ಸಂಘಟನೆಗೆ ಅವಕಾಶ ನೀಡಿದರು. ದೇಶದ ಎಲ್ಲಾ ಆಗು - ಹೋಗುಗಳ ಬಗ್ಗೆ ಅರಿವಿರುವ ರಾಷ್ಟ್ರಪತಿಗಳಿಗೆ ಸಿಎನ್‍ಸಿಯ ಉದ್ದೇಶದ ಬಗ್ಗೆಯೂ ಸ್ಪಷ್ಟ ಮಾಹಿತಿ ಇರುತ್ತದೆ. ನಮ್ಮ ಹೋರಾಟ ನ್ಯಾಯಯುತವಾದದ್ದು ಎಂಬ ಸತ್ಯದ ಅರಿವಿರುವದರಿಂದಲೇ ರಾಷ್ಟ್ರಪತಿಗಳು ಮೂರು ಬಾರಿ ಸಿಎನ್‍ಸಿಗೆ ಭೇಟಿಗೆ ಅವಕಾಶ ನೀಡಿದರು ಎಂದು ನಾಚಪ್ಪ ಪ್ರತಿಪಾದಿಸಿದರು. ದೇಶದ ಅಖಂಡತೆಗೆ ಕೊಡವರ ಕೊಡುಗೆ ಅಪಾರ. ಆದರೆ ಅದೇ ಕೊಡವರು ತಮ್ಮ ಹಕ್ಕನ್ನು ಕೇಳಿದರೆ, ಜಾತಿವಾದಿಗಳು ಎಂಬ ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರ ಲ್ಲದೇ ಕೊಡವ ಹಕ್ಕನ್ನು ಸರ್ಕಾರ ಪರಿಗಣಿಸಲೇಬೇಕು, ಪರಿಗಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.