ಗೋಣಿಕೊಪ್ಪಲು, ಆ. 13: ಕೊಡಗು ಜಿಲ್ಲೆಯಲ್ಲಿ ಬಲಿಜ ಜನಾಂಗ ಸುಮಾರು ನಾಲ್ಕು-ಐದು ದಶಕ ಗಳಿಂದಲೂ ಎಲೆ ಮರೆಯ ಕಾಯಿ ಯಂತೆ ಜೀವನ ನಡೆಸುತ್ತಾ ಬಂದಿದ್ದು, ಸಂಘಟನೆ ವೈಫಲ್ಯದೊಂದಿಗೆ ಅಪರಿಚಿತರಂತೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಕೊಡಗಿನ ಮೂಲ ನಿವಾಸಿ ಜನಾಂಗ ವಾರ್ಷಿಕವಾಗಿ ಕ್ರೀಡಾಕೂಟದ ಮೂಲಕ ಬಾಂಧವ್ಯ ಉತ್ತಮ ಪಡಿಸಿಕೊಳ್ಳುತ್ತಿದ್ದು ಬಲಿಜ ಸಮಾಜದ ಮೂಲಕವೂ ಜಿಲ್ಲಾ ಮಟ್ಟದ ಕ್ರೀಡಾಕೂಟ ಅರ್ಥಪೂರ್ಣ ವಾಗಿ ನಡೆಯಬೇಕಾಗಿದೆ. ಜಿಲ್ಲೆಯ ಬಲಿಜ ಜನಾಂಗವನ್ನು ಒಗ್ಗೂಡಿಸಲು ಬೂತ್ ಮಟ್ಟದಲ್ಲಿ ಕುಟುಂಬ ಸದಸ್ಯರ ಸಮೀಕ್ಷೆ ನಡೆಸುವ ಅಗತ್ಯವಿದೆ ಎಂದು ಇಲ್ಲಿನ ‘ಸಿಲ್ವರ್ ಸ್ಕೈ’ ಸಭಾಂಗಣದಲ್ಲಿ ನಡೆದ ಮೂರು ತಾಲೂಕು ಬಲಿಜ ಸಮಾಜ ಅಧ್ಯಕ್ಷರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್ ಅವರು ಮಾತನಾಡಿ, ಬಲಿಜ ಜನಾಂಗದಲ್ಲಿ ಬಡ - ಮಧ್ಯಮವರ್ಗ ಅಧಿಕವಿದ್ದು, ಸಮಾಜ ಸಂಘಟನೆ ಬಲವರ್ಧನೆ ಮೂಲಕ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ಸಾವು-ನೋವುಗಳಲ್ಲಿಯೂ ಸಹಕಾರ ನೀಡುವ ಅಗತ್ಯವಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಲಿಜ ವಿದ್ಯಾಭಿವೃದ್ಧಿ ಸಂಘದ ಅಸ್ತಿತ್ವದ ಅಗತ್ಯವಿದೆ. ವಾರ್ಷಿಕವಾಗಿ ಕನಿಷ್ಟ ಒಮ್ಮೆಯಾದರೂ ಜಿಲ್ಲಾ ಮಟ್ಟದಲ್ಲಿ ಬಲಿಜ ಸಮಾವೇಶ ಅಗತ್ಯ ಕಂಡುಬಂದಿದೆ ಎಂದರು.

ಸೋಮವಾರಪೇಟೆ ತಾಲೂಕು ಬಲಿಜ ಸೇವಾ ಸಮಾಜದ ಅಧ್ಯಕ್ಷ ಟಿ.ಎಸ್.ಬಾಲಕೃಷ್ಣ ಅವರು ಮಾತನಾಡಿ, ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಕುಟುಂಬಗಳಿದ್ದು, ಸಮರ್ಪಕವಾಗಿ ಗುರುತಿಸುವ ಕೆಲಸ ಆಗಬೇಕಾಗಿದೆ. ಕುಶಾಲನಗರದಲ್ಲಿ ಇತ್ತೀಚೆಗೆ ತಾಲೂಕು ಮಟ್ಟದ ಬಲಿಜ ಕ್ರೀಡಾಕೂಟವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಹಲವು ಬಲಿಜ ಬಾಂಧವರಲ್ಲಿ ಸಂಕುಚಿತ ಮನೋಭಾವ ಇನ್ನೂ ಉಳಿದಿದ್ದು, ಯಾವದೇ ವೈಯಕ್ತಿಕ ವಿಚಾರವನ್ನು ಸಮಾಜದಲ್ಲಿ ಒಡಕು ಮೂಡಿಸಲು ಬಳಸಿಕೊಳ್ಳಬಾರದು. ಈ ಹಿಂದೆ ಹಲವು ಬಲಿಜ ಸಂಘಗಳು ಜಿಲ್ಲೆಯಲ್ಲಿ ಸಣ್ಣ ಪುಟ್ಟ ಕಾರ್ಯಕ್ರಮ, ಸಂಘಟನೆಯ ಧ್ಯೇಯದೊಂದಿಗೆ ಕಾರ್ಯನಿರ್ವಹಿಸಿದ್ದರೂ ನಮ್ಮ ಜನಾಂಗ ಒಗ್ಗಟ್ಟಾಗಲಿಲ್ಲ. ಆದರೆ, ಪ್ರಸ್ತುತ ಜಿಲ್ಲೆಯಲ್ಲಿ ಬಲಿಜ ಸಂಘಟನೆಯ ಬಲವರ್ಧನೆ ಅಗತ್ಯವಿದೆ. ಶೀಘ್ರವೇ ಜಿಲ್ಲಾ ಬಲಿಜ ಸಮಾಜವನ್ನು ಅಸ್ತಿತ್ವಕ್ಕೆ ತರುವ ಮೂಲಕ ಅಭಿವೃದ್ಧಿಪರ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಬೇಕು ಎಂದು ಹೇಳಿದರು.ವೀರಾಜಪೇಟೆ ತಾಲೂಕಿನ ನೂತನ ಬಲಿಜ ಸಮಾಜದ ಅಧ್ಯಕ್ಷ ಎಸ್.ಕೆ.ಗಣೇಶ್‍ನಾಯ್ಡು ಅವರು ಮಾತನಾಡಿ, ವೈಯಕ್ತಿಕ ವೈಷಮ್ಯಗಳನ್ನು ಬದಿಗೊತ್ತಿ ಎಲ್ಲರೂ ಸಮಾಜದ ವೇದಿಕೆಯಲ್ಲಿ ಗುರುತಿಸಿಕೊಳ್ಳಬೇಕು. ಕೊಡಗು ಬಲಿಜ ಸಮಾಜ ಇತರೆ ಜಿಲ್ಲೆಯ ಬಲಿಜ ಸಂಘಗಳಿಗೆ ಮಾದರಿಯಾಗಿ ತುಂಬು ಚಟುವಟಿಕೆಯಿಂದ ಕಾರ್ಯ ನಿರ್ವಹಿಸುವಂತಾಗಬೇಕು. ನಾಯ್ಡು ಎಂದಾಕ್ಷಣ ಆಂಧ್ರಪ್ರದೇಶದಿಂದ ವಲಸೆ ಬಂದವರು ಎಂದು ಹಲವರು ಭಾವಿಸುತ್ತಾರೆ. ನಾವು ಕರ್ನಾಟಕದ ಬಲಿಜರು. ಕೊಡಗಿನಲ್ಲಿ ನಮಗೂ ಉಂಬಳಿ ಜಮೀನು ಇದೆ. ವೀರರಾಜೇಂದ್ರರ ಕಾಲದಲ್ಲಿ, ಶ್ರೀ ಕೃಷ್ಣ ದೇವರಾಯನ ಅವಧಿಯಲ್ಲಿ ಬಲಿಜ ಜನಾಂಗವನ್ನು ವಿಶೇಷ ಗೌರವದಿಂದ ಕಾಣಲಾಗಿದೆ. ಕೊಡಗಿನ ಎಲ್ಲ್ಲಾ ಮೂಲ ನಿವಾಸಿ ಜನಾಂಗದೊಂದಿಗೆ ಶತಮಾನಗಳಿಂದಲೂ ಅನ್ಯೋನ್ಯವಾಗಿ ಬಾಳುವೆ ನಡೆಸುತ್ತಾ ಬಂದಿದ್ದು, ಇದು ಮತ್ತಷ್ಟು ವೃದ್ಧಿಗೊಳ್ಳಬೇಕು. ಕೊಡಗಿನ ಮೂಲ ನಿವಾಸಿಗಳ ವಿವಾಹ ಇನ್ನಿತರ ಶುಭ ಸಮಾರಂಭಗಳಿಗೆ ಮಹಿಳೆಯರು, ಯುವತಿಯರಿಗೆ ಬಲಿಜ ಜನಾಂಗವೇ ಬಳೆ ತೊಡಿಸುವ ಸಂಪ್ರದಾಯ ರಾಜರ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ಹೇಳಿದರಲ್ಲದೆ ಶೀಘ್ರವೇ ವೀರಾಜಪೇಟೆ ತಾಲೂಕು ಬಲಿಜ ಸಮಾಜವನ್ನು ನೋಂದಣಿ ಮಾಡಲಾಗುವದು, 20 ಗ್ರಾ.ಪಂ. ಮಟ್ಟದಲ್ಲಿ ಬಲಿಜ ಜನಸಂಖ್ಯೆಯ ಸಮೀಕ್ಷೆಯನ್ನು ಕೈಗೊಳ್ಳಲಾಗುವದು ಎಂದರು.

ಕೊಡಗು ಜಿಲ್ಲಾ ಬಲಿಜ ಸಮಾಜ ಸಂಘಟನಾ ಸಂಚಾಲಕ ಟಿ.ಎಲ್. ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ಬಲಿಜ ಜನಾಂಗದ ಸಂಘಟನೆಗೆ ಯಾರೂ ಮುಂದಾಗದ ಸಂದರ್ಭ ಸದುದ್ದೇಶದೊಂದಿಗೆ ತಾಲೂಕು ಸಂಘಟನೆಯನ್ನು ಮೊದಲಿಗೆ ಅಸ್ತಿತ್ವಕ್ಕೆ ತರಲು ನಿರ್ಧರಿಸಲಾಯಿತು. ಇದೀಗ ಮೂರು ತಾಲೂಕು ಬಲಿಜ ಸಂಘಟನೆ ಕಾರ್ಯ ಯಶಸ್ವಿಯಾಗಿ ಮುಗಿದಿದ್ದು ಸುಮಾರು 13 ನಿರ್ದೇಶಕ ಬಲದ ಜಿಲ್ಲಾ ಬಲಿಜ ಸಮಾಜ ನೋಂದಾವಣೆ ಕಾರ್ಯ ಶೀಘ್ರ ನೆರವೇರಬೇಕಾಗಿದೆ. ಜಿಲ್ಲಾ ಬಲಿಜ ಸಮಾಜ ನೋಂದಾವಣೆಗೊಂಡಲ್ಲಿ ಮಾತ್ರ ಸರ್ಕಾರಿ ನಿವೇಶನಕ್ಕಾಗಿ ಹೋರಾಟ ಮಾಡಬಹುದು. ಮುಂದೆ ಸಮುದಾಯ ಭವನ, ಬಲಿಜ ಶಿಕ್ಷಣ ಸಂಸ್ಥೆ, ಶ್ರೀ ಯೋಗಿನಾರೇಯಣ ದೇವಸ್ಥಾನ, ಸುಸಜ್ಜಿತ ಆಟದ ಮೈದಾನ ಇತ್ಯಾದಿ ಅಭಿವೃದ್ಧಿಗೊಳ್ಳಬೇಕಿದ್ದು, ಮಹಾನಗರದಲ್ಲಿರುವ ಬಲಿಜ ಉದ್ಯಮಿಗಳನ್ನು ಕೊಡಗಿಗೆ ಆಹ್ವಾನಿಸುವ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಬಲಿಜ ಸಮುದಾಯ ವೈಯಕ್ತಿಕ ದ್ವೇಷ ಸಾಧನೆ, ಅಸೂಯೆ, ಕೀಳರಿಮೆ ಬಿಟ್ಟು ಸಮಾಜ ಕಟ್ಟುವ ಕೆಲಸಕ್ಕೆ ಮುಂದಾಗಬೇಕು, ಯಾರನ್ನೂ ದೂಷಣೆ ಮಾಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಪೆÇನ್ನಂಪೇಟೆ ವಿಭಾಗದಿಂದ ಆಶಾ ಶ್ರೀನಿವಾಸ್ ನಾಯ್ಡು, ಹಾತೂರುವಿನ ಟಿ.ವಿ. ಮದನ್‍ಕುಮಾರ್ ಅವರುಗಳನ್ನು ವೀರಾಜಪೇಟೆ ತಾಲೂಕಿನ ನೂತನ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ತಿತಿಮತಿ ವಿಜಯಲಕ್ಷ್ಮಿ ಕಾಫಿ ತೋಟದ ಮಾಲೀಕ ವಿನಯ್‍ಕುಮಾರ್ ಅವರನ್ನು ಜಿಲ್ಲಾ ಸಮಿತಿಗೆ ಇದೇ ಸಂದರ್ಭ ಆಯ್ಕೆ ಮಾಡಲಾಯಿತು.

ವೀರಾಜಪೇಟೆ ಶಿಕ್ಷಕಿ ಪದ್ಮಾವತಿ ಅವರು ಮಾತನಾಡಿ, ಹಲವು ವರ್ಷಗಳಿಂದ ಸಿದ್ದಾಪುರ ಗುಹ್ಯ ಪದ್ಮಾವತಿ ತೋಟ ಮಾಲೀಕರು ವಾರ್ಷಿಕ ವಿದ್ಯಾರ್ಥಿ ನಿಧಿಯನ್ನು ಜಿಲ್ಲೆಯ ಬಲಿಜ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಮೊತ್ತ ನೀಡಲು ಕಷ್ಟ ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಬಲಿಜ ವಿದ್ಯಾಭಿವೃದ್ಧಿ ಸಂಘದ ಮೂಲಕ ಬೃಹತ್ ನಿಧಿ ಸ್ಥಾಪನೆ ಮಾಡುವ ಅಗತ್ಯವಿದೆ. ಜಿಲ್ಲೆಯಲ್ಲಿ ಬಲಿಜ ಜನಾಂಗದ ಸಂಘಟನೆ ಕುಂಟುತ್ತಾ ಸಾಗಿರುವದು ವಿಷಾಧನೀಯ. ಇನ್ನೂ ಮುಂದಾದರೂ ಉತ್ತಮ ಕಾರ್ಯಕ್ರಮಗಳು ಜರುಗಲಿ ಎಂದು ಶುಭ ಹಾರೈಸಿದರು.

ಪೆÇನ್ನಂಪೇಟೆಯ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರಂಗಭೂಮಿ ಕಲಾವಿದ ಟಿ.ಎನ್.ಶ್ರೀನಿವಾಸ್ ನಾಯ್ಡು ಮಾತನಾಡಿ, ಸಂಘದ ಏಳಿಗೆಗೆ ಪೂರಕ ಸಹಕಾರ ನೀಡುವದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಹಿರಿಯರಾದ ನೇಮಿರಾಜ್, ದೇವಯ್ಯ, ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕಿ ಗೀತಾನಾಯ್ಡು, ಹಳ್ಳಿಗಟ್ಟು ಸಿಐಟಿ ಕಾಲೇಜಿನ ಅಂಕಿತಾ, ಪೆÇನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯದ ಶಿಕ್ಷಕಿ ವಿಲಾಸಿನಿ, ಸಮಾಜದ ಕಾರ್ಯದರ್ಶಿ ಶೇಖರ್, ಯತಿರಾಜ್ ನಾಯ್ಡು, ಮೂರ್ನಾಡು ಸುಸ್ಮಿತಾ ನಾಯ್ಡು ಮುಂತಾದವರು ಮಾತನಾಡಿದರು.