ಕುಶಾಲನಗರ, ನ. 28: 500 ಮತ್ತು 1000 ರೂ.ಗಳ ನೋಟುಗಳನ್ನು ಅಮಾನ್ಯಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಪ್ರತಿಪಕ್ಷಗಳು ಕರೆ ನೀಡಿದ್ದ ಆಕ್ರೋಶ್ ದಿವಸ್‍ಗೆ ಬೆಂಬಲ ವ್ಯಕ್ತಪಡಿಸಿ ಕುಶಾಲನಗರ ಎಸ್‍ಡಿಪಿಐ ಘಟಕ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ನಗರ ಬಿಜೆಪಿ ಕಾರ್ಯಕರ್ತರು ಸಂಭ್ರಮ ದಿನಾಚರಣೆ ಮಾಡಿದರು.

ಎಸ್‍ಡಿಪಿಐ ನಗರ ಘಟಕದ ಅಧ್ಯಕ್ಷ ಇ.ಕೆ. ಕರೀಂ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಇ.ಕೆ. ಕರೀಂ, ವಿರೋಧ ಪಕ್ಷಗಳು ಕರೆ ನೀಡಿದ ಆಕ್ರೋಶ್ ದಿನವನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸಿರುವದು ಖಂಡನೀಯ. ನೋಟ್ ರದ್ದು ವಿಷಯದಲ್ಲಿ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ನೀಡುತ್ತಿರುವದಾಗಿ ಆರೋಪಿಸಿದರು.

ಈ ಸಂದರ್ಭ ಎಸ್‍ಡಿಪಿಐ ಕಾರ್ಯದರ್ಶಿ ಶಫಿ, ಪ್ರಮುಖರಾದ ಜಲೀಲ್, ಕಲೀಲ್, ಬಾಷಾ, ಹನೀಫ್, ಪೈರೋಜ್, ಸಾಹುಲ್ ಹಮೀದ್ ಮತ್ತಿತರರು ಇದ್ದರು.

ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ನೇತೃತ್ವದಲ್ಲಿ ಯುವಮೋರ್ಚಾ ಕಾರ್ಯಕರ್ತರ ಸಹಯೋಗದೊಂದಿಗೆ ಕೇಂದ್ರ ಸರಕಾರದ ಕ್ರಮವನ್ನು ಬೆಂಬಲಿಸಿ ಸಂಭ್ರಮಾಚರಣೆ ನಡೆಸಿದರು. ಗಣಪತಿ ದೇವಾಲಯ ಮುಂಭಾಗ ಸೇರಿದ ಕಾರ್ಯಕರ್ತರು ವಿರೋಧ ಪಕ್ಷಗಳ ನಾಯಕರ ವಿರುದ್ಧ ಘೋಷಣೆ ಕೂಗಿ ದೇಶದ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸುತ್ತಿರುವ ಪ್ರಧಾನಿ ಮೋದಿ ಪರ ಘೋಷಣೆ ಕೂಗಲಾಯಿತು. ನಂತರ ಸಂಭ್ರಮಾಚರಣೆ ಅಂಗವಾಗಿ ಸಿಹಿ ಹಂಚಿದರು.

ಈ ಸಂದರ್ಭ ನಗರ ಬಿಜೆಪಿ ಕಾರ್ಯದರ್ಶಿ ಶಿವಾಜಿರಾವ್, ಉಪಾಧ್ಯಕ್ಷÀ ಮಂಡೇಪಂಡ ಬೋಸ್ ಮೊಣ್ಣಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸರಳ ರಾಮಣ್ಣ, ಕಮಲಾದೇವಿ, ರೀಟಾ ಶ್ಯಾಂ, ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ನಿಡ್ಯಮಲೆ ದಿನೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಭಾಸ್ಕರ್ ನಾಯಕ್, ಪ್ರಮುಖರಾದ ಎಂ.ವಿ. ನಾರಾಯಣ, ವಿ.ಡಿ. ಪುಂಡರೀಕಾಕ್ಷ, ಮಹೇಂದ್ರ, ಪಿ.ಪಿ. ಸತ್ಯನಾರಾಯಣ, ಜಿ.ಎಲ್. ನಾಗರಾಜ್, ವೈಶಾಖ್, ನಿಸಾರ್ ಅಹಮ್ಮದ್ ಮತ್ತಿತರರು ಇದ್ದರು.