ಸೋಮವಾರಪೇಟೆ, ಜೂ. 11: ಸಮೀಪದ ಶಾಂತಳ್ಳಿ ಗ್ರಾಮದ ಡಿ.ಪಿ. ಈರಮ್ಮ ಅವರ ಮಗ ಡಿ.ಪಿ. ರವಿ (32 ವರ್ಷ) ಕಳೆದ ತಾ. 19.05.2014 ರಂದು ಸಂಜೆ ಸುಮಾರು 7 ಗಂಟೆಗೆ ಮನೆಯಿಂದ ತೆರಳಿದವನು ನಂತರ ನಾಪತ್ತೆ. ಈತನ ಬಗ್ಗೆ ಇದುವರೆಗೂ ಸಣ್ಣ ಸುಳಿವೂ ಸಿಕ್ಕಿಲ್ಲ. ಪೊಲೀಸರು ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದರೂ ತನಿಖೆಗೆ ಸಹಕಾರಿಯಾಗುವ ಕುರುಹು ದೊರೆತಿಲ್ಲ.

ಸ್ಥಳೀಯರ ಪ್ರತಿಭಟನೆಗೆ ಮಣಿದ ಪೊಲೀಸರು ತನಿಖೆಯನ್ನು ಕೆಲಕಾಲ ಚುರುಕುಗೊಳಿಸಿದ್ದವರು ನಂತರ ಇಡೀ ಪ್ರಕರಣಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಸ್ಥಳೀಯ ಕೆಲವರನ್ನು ಠಾಣೆಗೆ ಕರೆತಂದು ತಮ್ಮದೇ ರೀತಿಯಲ್ಲಿ ‘ಟ್ರೀಟ್‍ಮೆಂಟ್’ ನೀಡಿದರೂ ರವಿಯ ಬಗ್ಗೆ ಯಾವದೇ ಮಾಹಿತಿಯಿಲ್ಲ. ತನ್ನ ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ ರವಿ ಕಾಣೆಯಾಗಿ ಎರಡು ವರ್ಷಗಳೇ ಕಳೆದರೂ ಮನೆಗೆ ವಾಪಸ್ ಆಗಿಲ್ಲ. ಈ ವಿಚಾರದಲ್ಲಿ ಕೆಲ ಸಮಯ ಸದ್ದು ಮಾಡಿದ ಶಾಂತಳ್ಳಿ, ಇದೀಗ ಶಾಂತವಾಗಿ ಮಲಗಿದೆ.

ತಾ. 19.5.14 ರಿಂದ ಕಾಣೆ: ಕಳೆದ ತಾ. 19.5.14 ರಂದು ಸಂಜೆ ಸುಮಾರು 5.30 ಗಂಟೆಗೆ ಶಾಂತಳ್ಳಿ ಜಂಕ್ಷನ್‍ಗೆ ಬಂದಿದ್ದ ರವಿ, ನಂತರ ಗ್ರಾಮದ ಪರಿಚಯಸ್ಥರ ಜೀಪ್‍ನಲ್ಲಿ ಕುಳಿತು ಮನೆ ಕಡೆಗೆ ತೆರಳಿದ್ದಾನೆ. ಸಂಜೆ ಸುಮಾರು 7 ಗಂಟೆಗೆ ‘ಅಮ್ಮಾ ಯಾರೋ ಹಣ ಕೊಡಬೇಕು. ತೆಗೆದುಕೊಂಡು ವಾಪಸ್ ಬರುತ್ತೇನೆ’ ಎಂದು ಮನೆಯಲ್ಲಿ ಹಾಕಿಕೊಳ್ಳುವ ಬಟ್ಟೆಯಲ್ಲಿಯೇ ಹೊರ ನಡೆದಿದ್ದಾನೆ. ಪರ್ಸ್ ಮತ್ತು ಮೊಬೈಲ್‍ನ್ನು ಮನೆಯಲ್ಲಿಯೇ ಬಿಟ್ಟಿದ್ದಾನೆ. ಹೀಗೆ ತೆರಳಿದವನು ನಂತರ ಮನೆಕಡೆ ವಾಪಸ್ ಬಂದಿಲ್ಲ.

ತಾ. 21 ರಂದು ದೂರು: ರವಿ ಅವರ ತಾಯಿ ಈರಮ್ಮ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಪೊಲೀಸ್ ಠಾಣೆಗೆ ತಾ. 21 ರಂದು ದೂರು ನೀಡಿದ್ದಾರೆ. ಪ್ರಾಥಮಿಕ ಹಂತದಲ್ಲಿ ದೂರನ್ನು ಪಡೆದ ಪೊಲೀಸರು ನಿರೀಕ್ಷಿತ ಮಟ್ಟದಲ್ಲಿ ತನಿಖೆಯನ್ನು ಚುರುಕುಗೊಳಿಸಿಲ್ಲ. ನಂತರ ಗ್ರಾಮದ ಮಹಿಳೆಯರು ಠಾಣೆಗೆ 2 ಬಾರಿ ಮುತ್ತಿಗೆ ಹಾಕಿ ಒತ್ತಡ ಹೇರಿದರು.

ಏನಾದ ರವಿ? : ಪೊಲೀಸರ ತನಿಖೆಯಲ್ಲಿ ಯಾವದೇ ಪ್ರಗತಿ ಕಂಡಿಲ್ಲ. ರವಿಯ ಮೊಬೈಲ್‍ಗೆ ಬಂದ ಕರೆಗಳು-ಹೊರ ಹೋದ ಕರೆಗಳ ಬಗ್ಗೆ ತನಿಖೆ ನಡೆಸಿದರೂ ಪ್ರಯೋಜನವಿಲ್ಲ. ಅಸಲಿಗೆ ತಾ. 19 ರಂದು ಮನೆಯಿಂದ ಹೊರಹೋದ ರವಿ ಏನಾದ? ಎಂಬದೇ ಯಕ್ಷ ಪ್ರಶ್ನೆ. ರವಿ ಏನಾಗಿರಬಹುದು? ಎಲ್ಲಿರಬಹುದು? ಇದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ!

ಹಣದ ವ್ಯವಹಾರವಿತ್ತು: ತನಗೆ ಸೇರಿದ 2 ಎಕರೆ ತೋಟದಲ್ಲಿ ಕೆಲಸ ಮಾಡಿಕೊಂಡು ಬೇರೆಯವರ ತೋಟಕ್ಕೆ ಕೂಲಿಗೆ ತೆರಳುತ್ತಿದ್ದ ರವಿ ಕೆಲವರೊಂದಿಗೆ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಂಡಿದ್ದ. ಪರಿಚಯಸ್ಥರೋರ್ವರು ಪಿಕ್‍ಅಪ್ ವಾಹನ ಖರೀದಿಸಲೆಂದು ಈತನಿಂದ ರೂ. 30 ಸಾವಿರ ಪಡೆದಿದ್ದರು. ಅದನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸಿರಲಿಲ್ಲ. ಈ ಬಗ್ಗೆ ಸಣ್ಣಪುಟ್ಟ ಜಗಳ ನಡೆದಿತ್ತು ಎಂಬ ಮಾಹಿತಿಯನ್ನು ಕೆಲವರು ಹಂಚಿಕೊಂಡಿದ್ದಾರೆ.

ದುರ್ವಾಸನೆ ಬಂದಿತ್ತು: ಇನ್ನು ರವಿ ಕಾಣೆಯಾದ 6 ದಿನಗಳ ನಂತರ ಈತನ ಮನೆಯಿಂದ ಅರ್ಧ ಕಿ.ಮೀ. ದೂರವಿರುವ ದೇವರಕಾಡು ಅರಣ್ಯ ಪ್ರದೇಶದಿಂದ ಸಂಜೆ ವೇಳೆಗೆ ದುರ್ವಾಸನೆ ಬರತೊಡಗಿತ್ತು. ಈ ಸುದ್ದಿ ಗ್ರಾಮದಲ್ಲಿ ಹರಡಿದ ಮಾರನೇ ದಿನವೇ ದುರ್ವಾಸನೆ ನಿಂತಿತು. ಆಗ ಮಳೆಯೂ ಬೀಳುತ್ತಿರಲಿಲ್ಲ. ಸಂಜೆ ಬರುತ್ತಿದ್ದ ದುರ್ವಾಸನೆ ಮಾರನೇ ದಿನ ಬೆಳಿಗ್ಗೆ ಇಲ್ಲವಾಗಿತ್ತು.

ಒಟ್ಟಾರೆ ರವಿ ಏನಾಗಿರಬಹುದು?: ತಾ. 19.5.14ರಂದು ಸಂಜೆ 6 ರಿಂದ 6.30ರ ನಡುವೆ ಮೊಬೈಲ್‍ನಲ್ಲಿ ಯಾರೊಂದಿಗೋ ಮಾತನಾಡುತ್ತಾ ಹಣ ಕೇಳಿದ್ದಾನೆ ಎನ್ನಲಾಗಿದೆ. ಅಂದು ಸಂಜೆಯೇ ರವಿಯ ಮನೆಯ ಮುಂಭಾಗ ಪಿಕ್‍ಅಪ್ ವಾಹನವೊಂದು ಬಂದು ನಿಂತಿದೆ. ಅದರ ಡೋರ್ ಹಾಕುವ ಶಬ್ದ ಸ್ಥಳೀಯರಿಗೆ ಕೇಳಿದೆ. ಇದರೊಂದಿಗೆ ಈ ಪಿಕ್‍ಅಪ್ ಖರೀದಿಗೆ ರವಿ ರೂ. 30 ಸಾವಿರ ಸಾಲವನ್ನು ನೀಡಿದ್ದನು ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬಂದು ಜನಕ್ಕೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ರವಿ ನಾಪತ್ತೆ ಪ್ರಕರಣದಲ್ಲಿ ಶಾಂತಳ್ಳಿ ಗ್ರಾಮದ ಸ್ಥಳೀಯ ಕೆಲವರು ಭಾಗಿಯಾಗಿದ್ದಾರೆ ಎಂಬದು ಗ್ರಾಮಸ್ಥರ ಸಂಶಯ. ಈ ಬಗ್ಗೆಯೂ ಪೊಲೀಸರು ಕೆಲವರನ್ನು ವಿಚಾರಣೆಗೆ ಒಳಪಡಿಸಿ ನಂತರ ಮನೆಗೆ ಕಳುಹಿಸಿದ್ದಾರೆ. ಆದರೆ ಇಂದಿಗೂ ನಿಖರ ಮಾಹಿತಿ ಲಭಿಸಿಲ್ಲ.

ಪ್ರಾರಂಭದಲ್ಲಿ ಶಾಂತಳ್ಳಿಯ ಮಂದಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಇವರ ಆಕ್ರೋಶಕ್ಕೆ ಬೆದರಿದ ಪೊಲೀಸರು ತನಿಖೆಯ ಭಾಗವಾಗಿ ಆಗಾಗ್ಗೆ ಶಾಂತಳ್ಳಿಗೆ ತೆರಳಿ ಕೆಲವರನ್ನು ವಿಚಾರಣೆಗೆ ಒಳಪಡಿಸಿದ್ದರು. ಜನತೆಯ ಆಕ್ರೋಶ ಕಡಿಮೆಯಾಗಿ ಈ ವಿಷಯ ನೇಪಥ್ಯಕ್ಕೆ ಸರಿಯಿತು. ಇತ್ತ ಪೊಲೀಸರು ತನಿಖೆಯನ್ನು ಕೈಚೆಲ್ಲಿ ಪ್ರಕರಣಕ್ಕೆ ಎಳ್ಳುನೀರು ಬಿಟ್ಟರು.

ಇಷ್ಟೆಲ್ಲಾ ಘಟನಾವಳಿಗಳು ನಡೆದರೂ, ರವಿ ಕಾಣೆಯಾಗಿ 2 ವರ್ಷ ಸಂದರೂ ಆತನ ತಾಯಿಗೆ ಇದರ ಅರಿವು ಅಷ್ಟಿಲ್ಲ. ‘ಈಗಷ್ಟೇ ಮಗ ಹೊರಗೆ ಹೋಗಿದ್ದಾನೆ; ಇನ್ನೇನು ಬಂದೇ ಬಿಡುತ್ತಾನೆ’ ಎಂಬ ಭ್ರಮಾಲೋಕದಲ್ಲೇ ಇದ್ದಾರೆ. ಅಂದ ಹಾಗೆ ರವಿ ಅವರ ತಾಯಿಗೆ ಮಾನಸಿಕ ಸ್ಥಿಮಿತ ಅಷ್ಟಾಗಿ ಇಲ್ಲ. ಆದರೆ ಮಾತೃ ಹೃದಯ ಮಾತ್ರ ಮಗನಿಗಾಗಿ ಹಂಬಲಿಸುವದು ನಿಂತಿಲ್ಲ. ಮಗ ಮನೆಯಲ್ಲಿಲ್ಲ!

-ವಿಜಯ್ ಹಾನಗಲ್