ಸೋಮವಾರಪೇಟೆ,ನ.28: ಕೇಂದ್ರ ಸರ್ಕಾರ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಕ್ರಮ ಖಂಡನೀಯವಾಗಿದ್ದು, ಯಾವದೇ ಮುಂದಾಲೋಚನೆಯಿಲ್ಲದೆ ಅರ್ಥಕ್ರಾಂತಿಯೆಂಬ ಹೆಸರಲ್ಲಿ ಅನರ್ಥ ಕ್ರಾಂತಿ ಮಾಡುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಕ್ರೋಶ ದಿನವನ್ನು ಆಚರಿಸಲಾಯಿತು.ಕಕ್ಕೆಹೊಳೆ ಜಂಕ್ಷನ್‍ನಲ್ಲಿರುವ ಪಕ್ಷದ ಕಚೇರಿಯಿಂದ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಘೋಷಣೆ ಕೂಗಿದರು.

ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ, ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಕೃಷ್ಣ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

(ಮೊದಲ ಪುಟದಿಂದ) ಶ್ರೀಮಂತರು, ಬಂಡವಾಳಶಾಹಿಗಳು ಕೂಡಿಟ್ಟಿರುವ ಕಪ್ಪುಹಣ ಚಿನ್ನ ಹಾಗೂ ಬೇನಾಮಿ ಆಸ್ತಿ ಹೆಸರಿನಲ್ಲಿದೆ. ಶೇಕಡ 6ರಿಂದ 7ರಷ್ಟು ಮಾತ್ರ ನೋಟಿನ ರೂಪದಲ್ಲಿದೆ. ದೇಶದಲ್ಲಿ ಶೇಕಡ 80ರಷ್ಟಿರುವ ರೈತರು ಬೆವರು ಸುರಿಸಿ ಸಂಪಾದಿಸಿದ ನೋಟುಗಳನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಹೆಂಡದ ದೊರೆ ವಿಜಯಮಲ್ಯನಂತಹ ತೆರಿಗೆಗಳ್ಳರು ಹಾಗೂ ಬಂಡವಾಳಶಾಹಿಗಳ ವಿವಿಧ ವಾಣಿಜ್ಯ ಬ್ಯಾಂಕ್‍ಗಳಲ್ಲಿರುವ 8ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡುವ ಕೆಲಸಕ್ಕೆ ಮೋದಿ ಸರ್ಕಾರ ಮುಂದಾಗಿದೆ. ದೇಶಾದ್ಯಂತ ನೋಟು ಬದಲಾವಣೆಗೆ ತೆರಳಿದ 80ಕ್ಕೂ ಅಧಿಕ ಬಡವರು ಸಾವನ್ನಪ್ಪಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ದೂರಿದರು.

ಜಿಲ್ಲಾ ಕಾಂಗ್ರೆಸ್‍ನ ಕಾರ್ಮಿಕ ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ನೋಟ್ ನಿಷೇಧ ಮಾಡಿದ್ದೇ ದೊಡ್ಡ ಸಾಧನೆ ಎಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ನೋಟು ನಿಷೇಧದ ಬಗ್ಗೆ ಸಂಸತ್ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರುಗಳ ಪ್ರಶ್ನೆಗಳಿಗೆ ಉತ್ತರ ಕೊಡದ ಪ್ರಧಾನಿಗಳು ಫಲಾಯನಗೈದು ಹೊರಗಡೆ ಮಾಧ್ಯಮಗಳಿಗೆ ಹೇಳಿಕೆ ನೀಡಿ, ಪ್ರಚಾರಗಿಟ್ಟಿಸುವ ನೆಪದಲ್ಲಿ ಜನರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಸ್. ನಂದಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಕೆ.ಎ.ಯಾಕೂಬ್, ತಾಲೂಕು ಅಧ್ಯಕ್ಷ ಅಬ್ಬಾಸ್, ಕೆಪಿಸಿಸಿ ಸದಸ್ಯೆ ಫಿಲೋಮಿನಾ, ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ, ಐಎನ್‍ಟಿಸಿ ಯು ರಾಜ್ಯ ಉಪಾಧ್ಯಕ್ಷ ಎನ್.ಎಂ. ಮುತ್ತಪ್ಪ, ಪಕ್ಷದ ಪ್ರಮುಖರಾದ ಟಿ.ಈ.ಸುರೇಶ್, ಔರಂಗಜೇಬ್, ಮಂಜುನಾಥ ಕುಮಾರ್, ಜೆ.ಆರ್. ಪುಷ್ಪಲತ, ಶೀಲಾ ಡಿಸೋಜ, ತಾಕೇರಿ ಸತೀಶ್, ವಿ.ಎ.ಲಾರೆನ್ಸ್, ಧರ್ಮಪ್ಪ, ಎಚ್.ಎ.ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.