ಸೋಮವಾರಪೇಟೆ, ಜೂ. 9: ಕಳೆದ ವಿಧಾನ ಸಭಾ ಮತ್ತು ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷ ನೀಡಿದ್ದ ಯಡವನಾಡು ಹಾಗೂ ಅತ್ತೂರು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಡೇರಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ದಶಕಗಳ ಬೇಡಿಕೆಯಾಗಿದ್ದ ತಾಲೂಕಿನ ಅತ್ತೂರು ಹಾಗೂ ಯಡವನಾಡು ವ್ಯಾಪ್ತಿಯ ಪ್ರದೇಶವನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಬೇಡಿಕೆಗೆ ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಸ್ಪಂದಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದ ಸಚಿವ ಸಂಪುಟ ಅನುಮೋದನೆ ದೊರೆತಿದೆ ಎಂದರು.

ಹಾರಂಗಿ ಜಲಾಶಯ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ಥರಿಗೆ ಯಡವನಾಡು ಗ್ರಾಮದಲ್ಲಿ 426.90 ಹೆಕ್ಟೇರ್, ಅತ್ತೂರು ಗ್ರಾಮದಲ್ಲಿ 298.40 ಹೆಕ್ಟೇರ್ ಪ್ರದೇಶವನ್ನು ಡಿನೋಟಿಫೈ ಮಾಡಿ ಕಂದಾಯ ನಿಗದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಈ ಭಾಗದ ಸಾವಿರಾರು ಮಂದಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರದ ಸವಲತ್ತುಗಳು ದೊರಕಲಿವೆ. ಈ ಕೆಲಸಕ್ಕೆ ಹಿಂದಿನ ಸಂಸದ ಹೆಚ್. ವಿಶ್ವನಾಥ್, ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್ ಅವರುಗಳ ಶ್ರಮವೂ ಅಪಾರವಾಗಿದೆ ಎಂದು ಲೋಕೇಶ್ ಸ್ಮರಿಸಿದರು.

ಕಳೆದ 17 ವರ್ಷಗಳಿಂದ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರು ಈ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವಲ್ಲಿ ಸಫಲರಾಗಲಿಲ್ಲ. ಇದರೊಂದಿಗೆ ಕಳೆದ 5 ವರ್ಷಗಳ ಕಾಲ ಅವರದೇ ಸರ್ಕಾರ ಆಡಳಿತದಲ್ಲಿದ್ದರೂ ಈ ಬಗ್ಗೆ ಗಮನಹರಿಸಲಿಲ್ಲ ಎಂದು ಲೋಕೇಶ್ ಹೇಳಿದರು.

ಚುನಾವಣೆ ನಂತರ ಜಾರ್ಜ್ ಅವರನ್ನು ಖುದ್ದು ಗ್ರಾಮಕ್ಕೆ ಕರೆದುಕೊಂಡು ಹೋಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಕಳೆದ ಕೆಲ ದಿನಗಳ ಹಿಂದೆ ಕಂದಾಯ ಇಲಾಖಾ ಕಾರ್ಯದರ್ಶಿಗಳಿಗೂ ಈ ಬಗ್ಗೆ ಗಮನಸೆಳೆಯಲಾಗಿತ್ತು. ಪರಿಣಾಮ ಮುಖ್ಯಮಂತ್ರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಡಿನೋಟಿಫೈ ಮಾಡಲು ಕ್ಯಾಬಿನೆಟ್ ಒಪ್ಪಿಗೆ ಪಡೆದಿದ್ದು, ದಶಕಗಳ ಬೇಡಿಕೆ ಈಡೇರಿಸಿದ್ದಾರೆ ಎಂದರು.

ಅಂತೆಯೇ ಕಳೆದ ಹಲವು ವರ್ಷಗಳಿಂದ ಕಿರಿಯ ಸಿವಿಲ್ ನ್ಯಾಯಾಲಯವಾಗಿ ಉಳಿದಿದ್ದ ಸೋಮವಾರಪೇಟೆಗೆ ಇದೀಗ ಹಿರಿಯ ನ್ಯಾಯಾಲಯ ಮಂಜೂರಾಗಲು ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಹಿರಿಯ ವಕೀಲರಾದ ಚಂದ್ರಮೌಳಿ ಅವರ ಪ್ರಯತ್ನ ಅಪಾರವಾದುದು ಎಂದು ಲೋಕೇಶ್ ತಿಳಿಸಿದರು.

ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್‍ನಡಿಯಲ್ಲಿ ಬಿಡುಗಡೆ ಮಾಡಿದ 50 ಕೋಟಿ ಹಣದಲ್ಲಿ ಉಳಿಕೆಯಾಗಿದ್ದ 27ಕೋಟಿ ಹಣ ಸರ್ಕಾರದಿಂದ ಮಂಜೂರಾತಿ ಆಗಿದೆ. ಇದರೊಂದಿಗೆ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮೂಲಕ 50 ಕೋಟಿ ಅನುದಾನ ಒದಗಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್‍ರವರು ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಲೋಕೇಶ್ ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರವು ರಾಜ್ಯ ಕರಕುಶಲ ನಿಗಮದ ಅಧ್ಯಕ್ಷೆ ವೀಣಾ ಅಚ್ಚಯ್ಯ ಅವರಿಗೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಕಾಂಗ್ರೆಸ್ ಪಕ್ಷದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿರುವದರಿಂದ ಅವರ ಆಯ್ಕೆ ಖಚಿತವಾಗಿದೆ. ಇದು ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ಅನುಕೂಲಕರವಾಗಲಿದೆ ಎಂದು ಹೇಳಿದರು.

ಜಿಲ್ಲೆಯ ಭಾಗಮಂಡಲ ಸಮೀಪ ಅಯ್ಯಂಗೇರಿಯಲ್ಲಿ ದೇವಟ್ ಪರಂಬು ವಿಚಾರದಲ್ಲಿ ಎರಡು ಜನಾಂಗದ ನಡುವೆ ಸಾಮರಸ್ಯ ಕದಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತೆರಳುವ ಸನ್ನಿವೇಶ ಉಂಟಾಗಿದ್ದರೂ ಜಿಲ್ಲೆಯ ಶಾಸಕದ್ವಯರು ಮೌನವಹಿಸಿರುವದು ಸರಿಯಲ್ಲ. ತಕ್ಷಣವೇ ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ ಎಂದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎ. ಲಾರೆನ್ಸ್, ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್, ಹಾನಗಲ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಿಥುನ್, ಪಟ್ಟಣ ಪಂಚಾಯಿತಿ ಸದಸ್ಯ ಉದಯ ಶಂಕರ್ ಉಪಸ್ಥಿತರಿದ್ದರು.