ಮಡಿಕೇರಿ, ಆ. 21: ವಿಶ್ವದ ಎಲ್ಲಾ ಜೀವಿಗಳಿಗಿಂತಲೂ ಮನುಷ್ಯ ಅತ್ಯಂತ ಬುದ್ಧಿವಂತ ಜೀವಿ. ಈ ಕಾರಣಕ್ಕಾಗಿ ಮನುಷ್ಯನ ಜೀವಕ್ಕೆ ಅಪಾರವಾದ ಮಹತ್ವವಿದೆ. ಅಲ್ಲದೆ ಮನುಷ್ಯನ ಜೀವದ ಬೆಲೆಯನ್ನು ಯಾರೂ ಬಲ್ಲವರಿಲ್ಲ. ಈ ಜೀವದ ಬೆಲೆಯನ್ನು ಯಾರಿಂದಲೂ ನಿಗದಿಗೊಳಿಸಲು ಸಾಧ್ಯವಿಲ್ಲ. ಆದರೆ ದಕ್ಷಿಣ ಕೊಡಗಿನ ತಿತಿಮತಿಯಲ್ಲಿ ಯುವಕನೊಬ್ಬನಿಗೆ ಕೇವಲ ರೂ. 75 ಸಾವಿರ ಬೆಲೆ ಕಟ್ಟಿದ ಘಟನೆ ಶುಕ್ರವಾರ ನಡೆದಿದೆ. ಇಂದಿನ ಈ ಆಧುನಿಕ ಕಾಲದಲ್ಲಿ ಒಂದು ಉತ್ತಮ ಹಸುವನ್ನು ಖರೀದಿಸಲೂ ಈ ಮೊತ್ತ ಸಾಕಾಗುವದಿಲ್ಲ.

ಏನಿದು ಘಟನೆ? ತಿತಿಮತಿ ಸಮೀಪದ ಮರೂರಿನ ಕಾರೆಕಂಡಿ ನಿವಾಸಿ ಎರವರ ಅಯ್ಯಪ್ಪ (22 ವರ್ಷ) ಎಂಬ ಪರಿಶಿಷ್ಟ ಪಂಗಡಕ್ಕೆ ಸೇರಿದ ಕೂಲಿ ಕಾರ್ಮಿಕ ಮಹದೇವ ಎಂಬವರ ಕಾಫಿ ತೋಟಕ್ಕೆ ತನ್ನ ಹೊಟ್ಟೆ ಪಾಡು ನೀಗಿಸಲು ಕಪಾತ್ ಕೆಲಸಕ್ಕೆ ತೆರಳಿದ್ದ. ಈ ವೇಳೆ ಮರ ಏರಿದ ಅಯ್ಯಪ್ಪ ಆಕಸ್ಮಿಕವಾಗಿ ಆಯತಪ್ಪಿ ನೆಲಕ್ಕೆ ಬಿದ್ದ. ಮರದ ಮೇಲಿಂದ ಬಿದ್ದ ರಭಸಕ್ಕೆ ಬೆನ್ನು ಮೂಳೆಗೆ ಪೆಟ್ಟಾಗಿದೆ. ಕೂಡಲೇ ಗಾಯಾಳು ಅಯ್ಯಪ್ಪನನ್ನು ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಯ್ಯಪ್ಪನ ಪ್ರಾಣ ಪಕ್ಷಿ ಹಾರಿಹೋಯಿತು. ಅಯ್ಯಪ್ಪನ ಸಾವಿನ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಜನ ಸೇರತೊಡಗಿದರು. ಈ ವೇಳೆ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಸೇರಿ ಸಂಧಾನ ನಡೆಸಿ ಅಯ್ಯಪ್ಪನ ಆಕಸ್ಮಿಕ ಸಾವಿನ ಬಗ್ಗೆ ಯಾವದೇ ಪೊಲೀಸ್ ದೂರು ನೀಡದಂತೆ ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿ ತೋಟದ ಮಾಲೀಕ ರೂ 55 ಸಾವಿರ ಹಾಗೂ ಅಯ್ಯಪ್ಪನನ್ನು ಕೆಲಸಕ್ಕೆ ಕಳುಹಿಸಿದ ಮೇಸ್ತ್ರಿ ಮರೂರಿನ ವ್ಯಕ್ತಿಯೊಬ್ಬರು ರೂ. 20 ಸಾವಿರ ಸೇರಿದಂತೆ ಒಟ್ಟು 75 ಸಾವಿರ ಹಣವನ್ನು ಮೃತ ಅಯ್ಯಪ್ಪನ ಪೋಷಕರಿಗೆ ನೀಡುವಂತೆ ತೀರ್ಮಾನಿಸಿ ಬಿಟ್ಟರು. ಈ ಪೈಕಿ ಕನಿಷ್ಟ ಮೊತ್ತವೊಂದನ್ನು ಮೃತ ಅಯ್ಯಪ್ಪನ ಶವಸಂಸ್ಕಾರಕ್ಕೆ ನೀಡಿ ಉಳಿದ ಹಣವನ್ನು ತಿಥಿ ಕರ್ಮಾಂತರ ಕಾರ್ಯದೊಳಗಾಗಿ ನೀಡುವಂತೆ ಒಪ್ಪಂದವಾಯಿತು. ನಂತರ ಸಂಜೆ ವೇಳೆಗೆ ಮೃತ ಅಯ್ಯಪ್ಪನ ಅಂತ್ಯ ಸಂಸ್ಕಾರ ನೆರವೇರಿತು. ಹೀಗೆ ಬಡ ಕಾರ್ಮಿಕ ಯುವಕನೊಬ್ಬನ ಜೀವಕ್ಕೆ ಕೇವಲ 75 ಸಾವಿರ ಬೆಲೆ ಕಟ್ಟಲಾಯಿತು. ಘಟನೆ ಕುರಿತಂತೆ ಪೊಲೀಸ್ ಇಲಾಖೆಗಾಗಲಿ, ಸಮಾಜ ಕಲ್ಯಾಣ ಇಲಾಖೆಗಾಗಲಿ ಯಾವದೇ ಮಾಹಿತಿಯನ್ನು ನೀಡಲಾಗಿಲ್ಲ. ಈ ಕುರಿತು ತೋಟದ ಮಾಲೀಕ ಮಹದೇವ್ ಅವರನ್ನು ‘ಶಕಿ’್ತ ಸಂಪರ್ಕಿಸಿದಾಗ ನಡೆದ ಘಟನೆಯ ನಿಜಾಂಶ ವಿವರಿಸಿದ ಅವರು, ಮೃತ ಅಯ್ಯಪ್ಪನ ತಂದೆಯ ಒಪ್ಪಿಗೆಯಂತೆ ಯಾವದೇ ಪ್ರಕರಣ ದಾಖಲಿಸಲಿಲ್ಲ. ಗ್ರಾಮದ ಜನಪ್ರತಿನಿಧಿಗಳು ಮತ್ತು ಮುಖಂಡರ ಸಮ್ಮುಖದಲ್ಲಿ ಚರ್ಚೆ ನಡೆದು ಮೃತನ ಕುಟುಂಬಕ್ಕೆ ಪರಿಹಾರ ನೀಡಲು ತೀರ್ಮಾನಿ ಸಲಾಗಿದೆ. ‘ಸತ್ತ ಮಗ ಏನೇ ಮಾಡಿದರೂ ಮರಳಿ ಬರುವದಿಲ್ಲ. ಆದ್ದರಿಂದ ಯಾವದೇ ದೂರು ಬೇಡ’ ಎಂದು ಮೃತ ಅಯ್ಯಪ್ಪನ ತಂದೆಯೇ ಹೇಳಿದ್ದಾರೆ ಎಂದು ಮಹದೇವ್ ಅವರು ತಿಳಿಸಿದ್ದಾರೆ.