ಗೋಣಿಕೊಪ್ಪಲು, ನ. 23: ವೀರಾಜಪೇಟೆ ತಾಲೂಕು ಯುವಜನ ಮೇಳ ತಾ.27 ರಂದು ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಶೀಲಾ ಬೋಪಣ್ಣ ತಿಳಿಸಿದ್ದಾರೆ.

ಬೆಕ್ಕೆಸೊಡ್ಲೂರು ಶ್ರೀರಾಮ ಯುವಕ ಸಂಘ ಹಾಗೂ ತಾಲೂಕು ಯುವ ಒಕ್ಕೂಟ ಆಶ್ರಯದಲ್ಲಿ ನಡೆಯುವ ಮೇಳದಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಗಳ ಮೂಲಕ ಕಲೆಯನ್ನು ಪ್ರೋತ್ಸಾಹಿಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಯಕ್ತಿಕ ವಿಭಾಗದಲ್ಲಿ ಭಾವಗೀತೆ, ಏಕಪಾತ್ರಾಭಿನಯ, ಗೀಗಿಪದ, ಲಾವಣಿ, ನಡೆಯಲಿದೆ. ಗುಂಪು ಸ್ಪರ್ಧೆಯಲ್ಲಿ ರಂಗಗೀತೆ, ಜನಪದ ನೃತ್ಯ, ಜನಪದ ಗೀತೆ, ಗೀಗಿಪದ, ಸೋಭಾನೆ ಪದ, ಭಜನೆ ಸ್ಪರ್ಧೆ ನಡೆಯಲಿದೆ. ಜನಪದ ಗೀತೆ, ಸೋಭಾನೆ ಪದ, ರಾಗಿ ಬೀಸೋ ಪದ ಸ್ಪರ್ಧೆಯಲ್ಲಿ 6 ಜನ, ಜನಪದ ನೃತ್ಯ, ಕೋಲಾಟ, ಗೀಗಿಪದ, ಭಜನೆಯಲ್ಲಿ 8 ಜನ ಭಾಗವಹಿಸಬಹುದಾಗಿದೆ ಎಂದರು. ಇಲ್ಲಿ ಗೆಲುವು ಪಡೆದ ತಂಡಗಳು ಡಿಸೆಂಬರ್ 4 ರಂದು ತಿತಿಮತಿಯಲ್ಲಿ ನಡೆಯುವ ಜಿಲ್ಲಾ ಯುವಜನ ಮೇಳದಲ್ಲಿ ಸ್ಪರ್ಧಿಸಲಿದ್ದಾರೆ ಎಂದರು.

ಹೆಚ್ಚಿನ ಮಾಹಿತಿಗೆ 9480926101, 9480753610 ಸಂಪರ್ಕಿಸ ಬಹುದಾಗಿದೆ. ಗೋಷ್ಠಿಯಲ್ಲಿ ಶ್ರೀರಾಮ ಯುವಕ ಸಂಘದ ಅಧ್ಯಕ್ಷ ಉತ್ತಪ್ಪ, ಉಪಾಧ್ಯಕ್ಷ ಮಿಲನ್, ಕಾರ್ಯದರ್ಶಿ ಸಂಪತ್, ಯುವ ಒಕ್ಕೂಟ ಮಾಜಿ ಅಧ್ಯಕ್ಷ ಗುರುರಾಜ್‍ರಾವ್ ಉಪಸ್ಥಿತರಿದ್ದರು.