ವೀರಾಜಪೇಟೆ, ಜೂ. 11: ಕಳೆದ 6 ದಿನಗಳಿಂದ ಈ ವಿಭಾಗಕ್ಕೆ ನಿರಂತರ ಮಳೆಯಾಗುತ್ತಿದ್ದು, ಬಿಸಿಲಿನ ಝಳದಿಂದ ಬತ್ತಿ ಹೋಗಿದ್ದ ಕೆರೆ, ತೋಡುಗಳು, ಹೊಳೆ ಹಾಗೂ ತೆರೆದ ಬಾವಿಗಳಲ್ಲಿ ಈಗಿನ ಮುಂಗಾರು ಮಳೆಯ ಆರಂಭದಿಂದಲೇ ನೀರಿನ ಮಟ್ಟ ಏರಿಕೆಯನ್ನು ಕಂಡಿದೆ.

ಎಲ್ಲೆಡೆಗಳಲ್ಲಿಯೂ ಮುಂಗಾರು ತಡವಾಗಿ ಆರಂಭಗೊಂಡರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗು ತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ರೈತ ವರ್ಗದಲ್ಲಿ ಸಂತಸ ಮೂಡಿದೆ. ನಿನ್ನೆ ದಿನ ಬೆಳಗ್ಗಿನಿಂದಲೇ ಮಳೆ ಸುರಿದು ಇಂದಿನ ಬೆಳಗಿನ ತನಕ ಮಳೆ ಮಂದಗತಿಯಲ್ಲಿ ಮುಂದುವರೆದಿದೆ. ಇಂದು ಬೆಳಗ್ಗಿನಿಂದಲೇ ಬಿಸಿಲಿನ ವಾತಾವರಣವಿದ್ದರೂ ಅಪರಾಹ್ನ ಮೋಡ ಕವಿದ ವಾತಾವರಣ ಉಂಟಾಗಿ ಮಳೆ ಸುರಿದಿದೆ.

ಕೇಂದ್ರದ ಹವಾಮಾನ ಇಲಾಖೆಯ ಪ್ರಕಾರ ತಾ. 9ರ ಮಧ್ಯ ರಾತ್ರಿಯಿಂದಲೇ ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದು, ನಿನ್ನೆ ಕೇರಳದಲ್ಲಿ ಉತ್ತಮ ಮಳೆಯಾಗಿದ್ದು ಇಂದು ಕೂಡ ಮಳೆ ಮುಂದುವರೆದಿದೆ. ಕೇರಳದಲ್ಲಿ ಮುಂಗಾರು ಮಳೆಯ ರಭಸ ಹೆಚ್ಚಿರುವದಾಗಿ ಕೇರಳದ ತಲಚೇರಿಯ ನಿವಾಸಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಮಳೆಯ ರಭಸ ಅಧಿಕವಾಗಿರುವದರಿಂದ ತಲಚೇರಿ, ಕಣ್ಣಾನೂರು ಸಮುದ್ರದ ಕರಾವಳಿ ಪ್ರದೇಶದಲ್ಲಿ ಮೀನು ಹಿಡಿಯುವದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕೇರಳದಲ್ಲಿ ಮುಂಗಾರು ಮಳೆ ಪ್ರವೇಶಿಸಿದ ಹಿನೆÀ್ನಲೆಯಲ್ಲಿ ಕೊಡಗು ಕೇರಳ ಗಡಿ ಪ್ರದೇಶದಲ್ಲಿಯೂ ನಿರಂತರವಾಗಿ ಮಳೆಯಾಗುತ್ತಿ ರುವದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವೀರಾಜಪೇಟೆ ವಿಭಾಗದಲ್ಲಿ 6 ದಿನಗಳ ಮುಂಗಾರು ಮಳೆಯಿಂದ ಆರ್ಜಿ, ಬಿಟ್ಟಂಗಾಲ, ಕದನೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಗದ್ದೆಗಳು ಜಲಾವೃತಗೊಂಡಿವೆ. ಬೇತ್ರಿ ಗ್ರಾಮದ ಕಾವೇರಿ ಹೊಳೆಯ ನೀರಿನ ಮಟ್ಟ ಎರಡು ಅಡಿಗಳಷ್ಟು ಏರಿದೆ.

ಇಂದಿನ ಮೋಡ ಕವಿದ ವಾತಾವಾರಣದಿಂದ ಮುಂಗಾರು ಮುಂದುವರೆಯುವ ಸಾಧ್ಯತೆ ಇದೆ. ಆರ್ಜಿ ಹಾಗೂ ಕದನೂರು ಗ್ರಾಮದ ಗದ್ದೆಗಳಲ್ಲಿ ಬೇಸಾಯದ ಕೆಲಸಕ್ಕೆ ಸಿದ್ದತೆ ನಡೆದಿದೆ.