ಮಡಿಕೇರಿ, ಜೂ. 14: ಮಡಿಕೇರಿಯ ಸೌರಭ ಕಲಾ ಪರಿಷತ್ ನೃತ್ಯ ಸಂಸ್ಥೆಯ ನಿರ್ದೇಶಕಿ ಡಾ. ಶ್ರೀವಿದ್ಯಾ ಮುರಳೀಧರ್ ಹಾಗೂ ವಿದುಷಿ ಶ್ರೀಧನ್ಯಾ ರಾಮನ್ ಎರಡು ತಿಂಗಳು ಯುನೈಟೆಡ್ ಕಿಂಗ್‍ಡಮ್‍ನಲ್ಲಿ ತಮ್ಮ ಭರತನಾಟ್ಯ ನೃತ್ಯ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.

ವಿಶೇಷವಾಗಿ ಯುನೈಟೆಡ್ ಕಿಂಗ್‍ಡಮ್‍ನ ಕಲ್ಚರಲ್ ವಿಂಗ್‍ನ ನೆಹರು ಮಂಟಪದಲ್ಲಿ ಡಾ. ಶ್ರೀ ವಿದ್ಯಾ ಅವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಅವರು ಬರೆದ ನೃತ್ಯ ವಿಷಯದ ಪುಸ್ತಕ ಭರತ ನೃತ್ಯಂ ವಿತ್ ದಿ ನ್ಯೂ ಫೋಕಸ್ ಲೋಕಾರ್ಪಣೆಯಾಯಿತು. ನೆಹರು ಸೆಂಟರ್‍ನ ಸಹಾಯಕ ನಿರ್ದೇಶಕಿ ವಿಭಾ ಮೆಹಾನಿರೆಟಾ, ಚೆನ್ನೈ ಕಲಾಕ್ಷೇತ್ರದ ಹಿರಿಯ ನೃತ್ಯ ಕಲಾವಿದೆ ವಿದುಷಿ ಅನುಷಾ ಬಾಲಸುಬ್ರಮಣ್ಯಂ, ಲಂಡನ್ ವಿಶ್ವವಿದ್ಯಾನಿಲಯದ ಡೀನ್ ಮ್ಯಾಕ್ಸಿಮ್ ಪಾಲ್ಗೊಂಡಿದ್ದರು. ಈ ಪುಸ್ತಕವನ್ನು ನವದೆಹಲಿಯ ಆಯು ಪಬ್ಲಿಕೇಷನ್ಸ್ ಪ್ರಕಾಶಿಸಿದೆ.

ಸೌರಭ ಸಂಸ್ಥೆಯ ಮತ್ತೋರ್ವ ನಿರ್ದೇಶಕಿ ಶ್ರೀಧನ್ಯ ಮನುಪ್ ಇವರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಹಿರಿಯ ನೃತ್ಯ ವಿಧ್ವಾಂಸ, 94 ವರ್ಷದ ಹಿರಿಯ ನಾಟ್ಯಾಚಾರ್ಯ ಕರ್ನಾಟಕ ಕಲಾ ತಿಲಕ ಕೆ. ಮುರಳೀಧರ ರಾವ್ ಬಗೆಗಿನ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು.

ನೃತ್ಯ ಕಾರ್ಯಾಗಾರವನ್ನು ಯುನೈಟೆಡ್ ಕಿಂಗ್‍ಡಮ್ ಸೌತ್ ಎಂಡ್ ಸೀ ಸಭಾಂಗಣದಲ್ಲಿ 45 ನೃತ್ಯ ವಿದ್ಯಾರ್ಥಿಗಳಿಗೆ ಡಾ. ಶ್ರೀವಿದ್ಯಾ ಹಾಗೂ ವಿದುಷಿ ಶ್ರೀ ಧನ್ಯ ಮನುಪ್ ನಡೆಸಿಕೊಟ್ಟರು.

ಲಂಡನ್‍ನ ಹೃದಯ ಭಾಗದಲ್ಲಿರುವ ಲಿವರ್ ಪೂಲ್ ಸ್ಟ್ರೀಟ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ರಿಟೀಷ್ ಉದ್ಯೋಗಿಗಳಿಗೆ ನೃತ್ಯ ಕಾರ್ಯಾಗಾರ ಏರ್ಪಡಿಸಲಾಗಿತ್ತು.