ಗೋಣಿಕೊಪ್ಪಲು, ಅ. 10: ಕಾವೇರಿ ಪದವಿಪೂರ್ವ ಕಾಲೇಜು, ಗೋಣಿಕೊಪ್ಪಲಿನ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಮಾಯಮುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆಯುತ್ತಿದೆ. ಈ ಶಿಬಿರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಾಬೂ ಜಗಜೀವನ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಶೋಧನಾ ಧಿಕಾರಿ ಎಂ. ಶ್ರೀನಿವಾಸಮೂರ್ತಿ ಜಾನಪದ ಒಂದು ಅನೌಪಚಾರಿಕ ಶಿಕ್ಷಣ. ಪೂರ್ವಜರು ತಮ್ಮ ದೈಹಿಕ ಶ್ರಮದ ನೋವನ್ನು ಮರೆಯುವ ಸಲುವಾಗಿ, ಕಾಲ ಕಳೆಯುವ ಸಲುವಾಗಿ ತಮ್ಮ ಮಾತುಗಳನ್ನು ಹಾಡುಗಳಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹಂಚಿಕೊಳ್ಳುವ ಮೂಲಕ ಜಾನಪದ ಹಾಡುಗಳನ್ನು ಸೃಷ್ಟಿಸಿದರು.

ಗಂಡಿಗೆ ಹೆಣ್ಣು ನೋಡುವ ಸಂದರ್ಭ, ಮದುವೆಯ ಸಂದರ್ಭ, ಪ್ರಸ್ತದ ಸಂದರ್ಭಗಳಲ್ಲಿ ತುಂಬಾ ವಿಶೇಷವಾದ ಸೋಬಾನೆ ಪದಗಳನ್ನು ಜಗತ್ತಿಗೆ ಬಳುವಳಿಯಾಗಿ ನೀಡಿದ್ದಾರೆ. ಯಾರನ್ನೇ ಹೊಗಳಲು, ತೆಗಳಲು, ಅಭಿಪ್ರಾಯಗಳನ್ನು ಅಭಿವ್ಯಕ್ತಿಸಲು ಅರ್ಥಗರ್ಭಿತವಾದ ಗಾದೆಗಳನ್ನು ಸೃಜಿಸಿದ್ದಾರೆ.

ಇಂತಹ ಸಾಹಿತ್ಯದ ಸೃಷ್ಟಿಕರ್ತರು ಜಾನಪದರು. ಈ ಜಾನಪದರಿಗೆ ಯಾವ ವಿಶ್ವವಿದ್ಯಾ ನಿಲಯಗಳು ಶಿಕ್ಷಣ ನೀಡಲಿಲ್ಲ. ಆದರೆ ಇಂದು ಜಾನಪದದ ಕಲಿಕೆಗೆ ವಿಶ್ವ ವಿದ್ಯಾನಿಲಯಗಳನ್ನು ಸ್ಥಾಪಿಸಿ ಆ ಮೂಲಕ ವೈಜ್ಞಾನಿಕ ನೆಲೆಗಟ್ಟಿನ ಸಂಶೋಧನೆಗಳನ್ನು ಜಗತ್ತಿಗೆ ಪರಿಚಯಿಸಲಾಗುತ್ತಿದೆ. ನಗರೀಕರಣದ ಬೆಳವಣಿಗೆ ಜಾನಪದವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಬಹುತೇಕ ನಗರವಾಸಿಗಳು ಯಾಂತ್ರಿಕ ಬದುಕನ್ನು ಸಾಗಿಸುತ್ತಿದ್ದು, ಸಂಬಂಧಗಳ ಬೆಲೆ ಕಳೆದು ಕೊಳ್ಳುತ್ತಿದ್ದಾರೆ. ಆದಾಗ್ಯೂ ಜಾನಪದ ತನ್ನ ಸ್ವಂತಿಕೆಯ ನೆಲೆಯಲ್ಲಿ ಇನ್ನೂ ಜನರ ಮನಗಳಲ್ಲಿ ಹಾಸು ಹೊಕ್ಕಾಗಿದೆ. ಅವರ ಭಾವನೆಗಳಿಗೆ ಜೀವ ತುಂಬುತ್ತಾ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದೆ ಎಂದು ಸ್ವಯಂ ಸೇವಕರಿಗೆ ಜಾನಪದ ಸಾಹಿತ್ಯ, ಸಂಸ್ಕøತಿ, ಬೆಳವಣಿಗೆಗಳ ಬಗ್ಗೆ ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವದರ ಮೂಲಕ ಮನನ ಮಾಡಿಸಿದರು.

ಕಾರ್ಯಕ್ರಮದ ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಜೀವೆಂಟ್ ಎಚ್‍ವ್ಯಾಕ್ ಲೀಡರ್ಸ್‍ನ ಸಂಸ್ಥಾಪಕ ಎಂ. ಸಿದ್ದೇಶ್ ಯುವಜನರು ಇಂದಿನ ಆಧುನಿಕ ಯುಗದಲ್ಲಿ ತಾಂತ್ರಿಕತೆಯತ್ತ ಮನಸ್ಸು ಮಾಡಬೇಕು. ಏಕೆಂದರೆ ಎಲ್ಲೆಡೆಯು ತಂತ್ರಜ್ಞಾನ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ಎಲ್ಲೆಲ್ಲಿಯೂ ಪಸರಿಸುತ್ತಿದೆ. ಕಂಪ್ಯೂಟರ್ ಜ್ಞಾನವಿಲ್ಲದ ಯಾವದೇ ವ್ಯಕ್ತಿಯನ್ನು ಅನಕ್ಷರಸ್ಥ ಎಂದೇ ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾಂತ್ರಿಕತೆಯ ತಂತ್ರವನ್ನು ತಮ್ಮ ಬದುಕಿನ ಮಂತ್ರವಾಗಿರಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಾಯಮುಡಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಟಿ.ವಿ. ಶ್ರೀಧರ ಸ್ವಯಂ ಸೇವಕರಿಗೆ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡು ಈ ದೇಶದ ಅಭಿವೃದ್ಧಿಗೆ ಸಹಕಾರಿ ಯಾಗಬೇಕು ಎಂದು ಕರೆ ನೀಡಿದರು.

ಮತ್ತೊಬ್ಬ ಗ್ರಾಮ ಪಂಚಾಯಿತಿ ಸದಸ್ಯ ಪಿ.ಕೆ. ಮಣಿಕುಂಜ, ಕಾವೇರಿ ಯುವಕ ಸಂಘದ ಅಧ್ಯಕ್ಷ ಮಲ್ಲಂಡ ಜಿ. ಮಹೇಶ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್.ಬಿ. ಸಿದ್ಧರಾಜು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಿ.ಕೆ. ಚಿಣ್ಣಪ್ಪ ಸ್ವಯಂ ಸೇವಕರಿಗೆ ದೇಶದ ಐಕ್ಯತೆಗೆ ಎನ್.ಎಸ್.ಎಸ್. ಶಿಬಿರಗಳು ಸಹಕಾರಿಯಾಗುತ್ತವೆ. ಯುವಕರು ಭಾವೈಕ್ಯತಾ ಭಾವನೆ ಯನ್ನು ತಮ್ಮ ರಕ್ತಗತ ಮಾಡಿಕೊಂಡು ದೇಶಾಭಿಮಾನ ವನ್ನು ಮೆರೆಯಬೇಕು. ಆಗಲೇ ಎನ್.ಎಸ್.ಎಸ್. ಶಿಬಿರಗಳು ಸಾರ್ಥಕವಾಗುತ್ತವೆ ಎಂದು ಆಶಿಸಿದರು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅತಿಥಿಗಳನ್ನು ಸ್ವಾಗತಿಸಿದರೆ, ಎನ್.ಎಸ್. ಕಾರ್ಯಕ್ರಮಾಧಿಕಾರಿ ಎಸ್.ಆರ್. ತಿರುಮಲಯ್ಯ ವಂದಿಸಿದರು.