ಮಡಿಕೇರಿ, ಆ. 7: ಸೂತಕದ ಛಾಯೆಯಲ್ಲಿ ರಾಜಕೀಯದ ಲಾಭ ಪಡೆಯುವದು ಬಿಜೆಪಿಯ ಚಾಳಿಯಾಗಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಜೀವಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಯ ಶವ ಯಾತ್ರೆ ಮಾಡಲಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್ ತಿರುಗೇಟು ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯನ್ನು ಶವಯಾತ್ರೆ ಎಂದು ಟೀಕಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಶವ, ಸಾವು, ಸೂತಕ ಮತ್ತು ಹತ್ಯೆ ಇವುಗಳು ಬಿಜೆಪಿಯ ಕೆಳಮಟ್ಟದ ರಾಜಕಾರಣದ ಮನೋಭಾವವಾಗಿದೆ ಎಂದು ಆರೋಪಿಸಿದರು. ಕೇಂದ್ರ ಸರಕಾರ ದಲಿತರ, ಅಲ್ಪಸಂಖ್ಯಾತರ ಹಾಗೂ ರೈತರ ವಿರೋಧಿಯಾಗಿದೆ ಎಂದು ಆರೋಪಿಸಿರುವ ಅವರು ಕೇಂದ್ರ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಮಣಿಸುವದಲ್ಲದೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸನ್ನು ಅಧಿಕಾರಕ್ಕೆ ತರುವ ಮೂಲಕ ಬಿಜೆಪಿಯ ಶವ ಯಾತ್ರೆ ಮಾಡಲು ಪಕ್ಷ ಸಜ್ಜಾಗಿದೆ.

ಯಾರಾದರು ಸಾಯುವದನ್ನೇ ಕಾಯುವ ಬಿಜೆಪಿ ಸಾವಿನಲ್ಲೂ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುತ್ತದೆ ಎಂದು ಆರೋಪಿಸಿ ದರು. ಮಾಹಿತಿ ತಂತ್ರಜ್ಞಾನ, ಉದ್ಯೋಗ ಸೃಷ್ಟಿಯ ಮೂಲಕ ಯುವ ಸಮೂಹವನ್ನು ಮೇಲ್ಪಂಕ್ತಿಗೆ ತರುವಲ್ಲಿ ಕೇಂದ್ರದ ಬಿಜೆಪಿ ಸÀರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸುಮಾರು 122 ಮಂದಿ ಪೊಲೀಸ್ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಯಾವದಾದರು ಸಚಿವರು ರಾಜೀನಾಮೆ ನೀಡಿದ್ದರೆ ಎನ್ನುವದನ್ನು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಂಜುನಾಥ್ ಕುಮಾರ್ ತಿಳಿಸಿದರು.

ಕೇಂದ್ರ ಸರ್ಕಾರ ಕೇವಲ ಪ್ರಚಾರ ಮತ್ತು ಜಾಹೀರಾತಿನ ಮೂಲಕ ಕಾಲ ಕಳೆಯುತ್ತಿದೆ. ಚುನಾವಣೆಗೂ ಮುನ್ನ ಸ್ವದೇಶಿ ಎಂದು ಹೇಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಅಧಿಕಾರಕ್ಕೆ ಬಂದ ಬಳಿಕ ವಿದೇಶದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ದೇಶದ ಜನರ ಬಗ್ಗೆ ಕಾಳಜಿ ಇಲ್ಲದ ಪ್ರಧಾನಿ, ಅನಿವಾಸಿ ಭಾರತೀಯರು ಮತ್ತು ವಿದೇಶಿಯರಿಗಾಗಿ ಸಮಯ ಮೀಸಲಿಡುತ್ತಿದ್ದಾರೆ. ಸ್ವದೇಶಿ ವ್ಯಾಮೋಹ ಈಗ ಎಲ್ಲಿ ಮಾಯವಾಯಿತು ಎಂದು ಪ್ರಶ್ನಿಸಿದ ಮಂಜುನಾಥ್ ಕುಮಾರ್, ಬಿಜೆಪಿ ಅಧಿಕಾರಕ್ಕೆ ಬರುವದಕ್ಕೆ ಮೊದಲು ಮತ್ತು ನಂತರ ಒಂದೊಂದು ಮನೋಭಾವವನ್ನು ಪ್ರದರ್ಶಿಸುತ್ತಿದೆ ಎಂದು ಟೀಕಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯವನ್ನು ನೀಡಿ ಹಸಿವಿನಿಂದ ಬಡವರು ನರಳುವದನ್ನು ತಪ್ಪಿಸಿದೆ. ಅಪೌಷ್ಠಿಕತೆ ಮತ್ತು ಬುದ್ಧಿ ಮಾಂಧ್ಯತೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತಂದಿದೆ. ಈ ರೀತಿಯ ಜನಪರವಾದ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸದ ಕೇಂದ್ರ ಸರ್ಕಾರ ಪಾಳೇಗಾರಿಕೆಯ ಸಂಸ್ಕøತಿಯನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಹಿಂದೆ ಯುಪಿಎ ಸರ್ಕಾರವಿದ್ದಾಗ ದೇಶದಲ್ಲಿ ಸುಮಾರು 22 ಸಾವಿರ ದೌರ್ಜನ್ಯ ಪ್ರಕರಣಗಳು ನಡೆದಿವೆ, ಆದರೆ ಇಂದು ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ 37 ಸಾವಿರ ಪ್ರಕರಣ ದಾಖಲಾಗಿದ್ದು, ದೌರ್ಜನ್ಯದ ತೀವ್ರತೆ ಹೆಚ್ಚಾಗಿದೆಯೆಂದು ಮಂಜುನಾಥ್ ಕುಮಾರ್ ಆರೋಪಿಸಿದರು. 2009 ರಲ್ಲಿ ಕೇವಲ ಶೇ.18 ರಷ್ಟು ಮತಗಳಿಸಿದ್ದ ಬಿಜೆಪಿ, ನಂತರದ ಲೋಕಸಭಾ ಚುನಾವಣೆಯಲ್ಲಿ ಮೋಡಿ ಮಾಡಿ, ಶೇ.33 ರಷ್ಟು ಮತಗಳಿಸಲು ಯಶಸ್ವಿಯಾಗಿತ್ತು. ಆದರೆ, ದಲಿತರು ಮತ್ತು ಅಲ್ಪಸಂಖ್ಯಾ ತರಿಗೆ ರಕ್ಷಣೆ ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಶೇ.37 ರಷ್ಟು ಮಂದಿ ಇದ್ದು, ಇವರೆಲ್ಲರು ಒಗ್ಗಟ್ಟಾಗಿ ಕಾಂಗ್ರೆಸ್ ಪರ ನಿಂತರೆ ಬಿಜೆಪಿ ಹೀನಾಯ ಸ್ಥಿತಿ ಅನುಭವಿಸಲಿದೆ ಯೆಂದು ಮಂಜುನಾಥ್ ಕುಮಾರ್ ಅಭಿಪ್ರಾಯಪಟ್ಟರು.

ಯುಪಿಎ ಸರ್ಕಾರವಿದ್ದಾಗ ಪೆಟ್ರೋಲ್ ದರ ರೂ.100 ರಷ್ಟು ಏರಿಸುವ ಅನಿವಾರ್ಯತೆ ಇದ್ದಾಗಲು ರೂ.30 ರಷ್ಟು ಸಹಾಯಧನವನ್ನು ಒದಗಿಸಿತ್ತು. ಆದರೆ, ಇಂದು ವಿದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಲೀಟರ್‍ಗೆ ಕೇವಲ ರೂ.36 ಇದ್ದರೂ 66 ರೂ.ಗಳಿಗೆ ಮಾರಾಟ ಮಾಡುತ್ತಿದೆ. ತೈಲೋತ್ಪನ್ನ ಕ್ಷೇತ್ರಗಳಲ್ಲಿ ಸಹಾಯಧನವನ್ನು ಕಡಿತ ಮಾಡಿ ಕೇಂದ್ರ ಸರ್ಕಾರ ಜನ ವಿರೋಧಿ ನಿಲುವನ್ನು ಅನುಸರಿಸುತ್ತಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿ ದರು. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಬಿಜೆಪಿ ಹೇಳಿಕೆ ಸಂವಿಧಾನದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ರಮಾನಾಥ್, ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಹಾಗೂ ಡಿಸಿಸಿ ಸದಸ್ಯ ಎ.ಕೆ. ಹಕೀಂ ಉಪಸ್ಥಿತರಿದ್ದರು.