ಮಡಿಕೇರಿ, ಸೆ. 9: ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ಜಾನಪದ ಕಲಾವಿದರಿಗಾಗಿ ಮೀಸಲಿಡಲು ಪರಿಷತ್ ತೀರ್ಮಾನಿಸಿದೆ.ಇತ್ತೀಚೆಗೆ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತ ಶಯನ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಕೊಡಗಿನಲ್ಲಿ ಬಹಳಷ್ಟು ಜಾನಪದ ಕಲಾವಿದರಿದ್ದಾರೆ. ಪ್ರತಿಭೆ ಇದ್ದರೂ ಕೂಡ ಆರ್ಥಿಕ ಸಮಸ್ಯೆಯಿಂದಾಗಿ ವೇದಿಕೆಯೇರದವರೂ ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನೈಜ ಜಾನಪದ ಕಲಾವಿದರಿಗೆ ಕೊಡಗು ಜಾನಪದ ಪರಿಷತ್ ಕ್ಷೇಮನಿಧಿ ಸ್ಥಾಪಿಸಿ ತನ್ನಿಂದಾದ ನೆರವು ನೀಡಲು ಒಮ್ಮತದ ನಿರ್ಣಯ ಕೈಗೊಂಡಿತು. ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಜಾನಪದ ಗೀತಗಾಯನ ಸ್ಪರ್ಧೆ, ಗ್ರಾಮೀಣ ಮಟ್ಟದಲ್ಲಿ ಜಾನಪದ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಯಿತು.

ಜಿಲ್ಲೆಯ ಜಾನಪದ ಕಲಾವಿದರ ಮಾಹಿತಿ ಸಂಗ್ರಹಿಸಿ ಪುಸ್ತಕವೊಂದನ್ನು ಹೊರ ತರುವದು.

(ಮೊದಲ ಪುಟದಿಂದ) ವೀರಾಜಪೇಟೆ ವ್ಯಾಪ್ತಿಯಲ್ಲಿ ಬೃಹತ್ ಜಾನಪದ ಮೇಳ ಹಮ್ಮಿಕೊಳ್ಳುವದು. ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ, ಗೋಣಿಕೊಪ್ಪ ದಸರಾ ಉತ್ಸವದಲ್ಲಿ ಜಾನಪದ ಪರಿಷತ್ ವತಿಯಿಂದ ಕಾರ್ಯಕ್ರಮ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಕ್ಷೇಮನಿಧಿಯ ಫಲಾನುಭವಿ ಕಲಾವಿದರು ಜಾನಪದ ಪರಿಷತ್ ಸದಸ್ಯರಾಗಿರಬೇಕು. ಜಿಲ್ಲೆಯಾದ್ಯಂತ ಸದಸ್ಯತ್ವ ಅಭಿಯಾನ ನಡೆಸಲೂ ಸಭೆ ನಿರ್ಧರಿಸಿತು.ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಸಂಚಾಲಕ ಮೇರಿಯಂಡ ಸಂಕೇತ್ ಪೂವಯ್ಯ, ಜಿಲ್ಲಾ ಖಜಾಂಚಿ ಸಂಪತ್‍ಕುಮಾರ್, ಕಾರ್ಯದರ್ಶಿ ಉಜ್ವಲ್ ರಂಜಿತ್, ಮಡಿಕೇರಿ ತಾಲೂಕು ಅಧ್ಯಕ್ಷ ಅನಿಲ್ ಹೆಚ್.ಟಿ. ವೀರಾಜಪೇಟೆ ತಾಲೂಕು ಅಧ್ಯಕ್ಷ ಮಹೇಶ್ ನಾಚಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಚಂದ್ರ ಮೋಹನ್ ಹಾಗೂ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.