ಮಡಿಕೇರಿ, ಅ. 28: ಸರಕಾರ ಸರ್ವಜನಾಂಗದ ಏಳಿಗೆಗಾಗಿ ಅಥವಾ ಅಭಿವೃದ್ಧಿಗಾಗಿ ಸಮಾಜ ಸುಧಾರಕರ ಮತ್ತು ಹೋರಾಟಗಾರರ ದಿನಾಚರಣೆಯನ್ನು ಆಚರಿಸುವದನ್ನು ಬೆಂಬಲಿಸುವದು ಸಹಜ. ಆದರೆ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಎಂಬ ಮಾತ್ರಕ್ಕೆ ಟಿಪ್ಪು ದಿನಾಚರಣೆಯನ್ನು ಆಚರಿಸುವದು ಸರಿಯಲ್ಲ ಎಂದು ಕೊಯವ ಸಮಾಜ ಹೇಳಿದೆ.

ಈ ಬಗ್ಗೆ ಲಿಖಿತ ಹೇಳಿಕೆ ನೀಡಿದ್ದು, ಟಿಪ್ಪು ಕೊಡಗಿನಾದ್ಯಂತ ಕೊಡವ ಮತ್ತು ಭಾಷಿಕ ಜನಾಂಗದವರನ್ನು ಮತಾಂತರಗೊಳಿಸಿರುವದು ಮತ್ತು ಹಿಂದೂ ದೇವಾಲಯಗಳನ್ನು ಭಗ್ನಗೊಳಿಸಿರುವದು ಕೊಡಗಿನ ಜನ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ.

ಒಬ್ಬ ಕ್ರೂರ ಆಡಳಿತಗಾರ ತನ್ನ ಸ್ವಂತಕ್ಕಾಗಿ ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟೀಷರೊಡನೆ ಹೋರಾಡಿದ್ದು ಇತಿಹಾಸದಲ್ಲಿ ಪ್ರತಿಬಿಂಬಿತವಾಗಿದೆ. ಸರ್ವ ಜನಾಂಗಕ್ಕೆ ಯಾವ ಪ್ರಯೋಜನವೂ ಆಗಿಲ್ಲ.

ಆಸ್ಥಾನದಲ್ಲಿದ್ದ ಹಿಂದೂ ಅಧಿಕಾರಿಗಳಿಗೆ ಕಿರುಕುಳ ಇದ್ದಿದ್ದು ಇತಿಹಾಸದಲ್ಲಿ ಕಂಡು ಬಂದಿರುತ್ತದೆ. ಹಾಗಾಗಿ ಹಿಂದೆಂದೋ ಘಟಿಸಿ ಹೋದ ಘಟನಾವಳಿಯನ್ನು ಸರಕಾರ ಮುಂದಿರಿಸಿಕೊಂಡು ಕಳೆದ ವರ್ಷ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಿ ವಿ.ಹಿಂ.ಪ. ಕಾರ್ಯಕರ್ತ ದೇವಪಂಡ ಕುಟ್ಟಪ್ಪ ಅವರನ್ನು ಬಲಿ ತೆಗೆದುಕೊಂಡಿದೆ. ಇದೀಗ ಮತ್ತೆ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿದ್ದು, ಇನ್ನೆಷ್ಟು ಜೀವಗಳನ್ನು ಬಲಿ ತೆಗೆಯಲು ಹೊರಟಿದೆಯೋ ಗೊತ್ತಿಲ್ಲ ಎಂದು ಅಭಿಪ್ರಾಯಿಸಿದೆ.

ಕೊಡಗಿನಲ್ಲಿ ಸಾಮರಸ್ಯದಿಂದ ಬಾಳಿ ಬದುಕಿಕೊಂಡು ಹೋಗುವ ಜನಾಂಗ-ಜನಾಂಗಗಳ ಮಧ್ಯೆ ಶಾಂತಿ ಕದಡುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ. ಇದರ ಬದಲು ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಡಾ. ಮೌಲಾನಾ ಆಜಾದ್‍ರ ದಿನಾಚರಣೆಯನ್ನು ಆಚರಿಸಲಿ ಅಥವಾ ಸಂತ ಶಿಶುನಾಳ ಷರೀಫರಂತಹ ಸಮಾಜ ಸುಧಾರಕರ ದಿನಾಚರಣೆಯನ್ನು ಆಚರಿಸಲಿ. ಅದಕ್ಕೆ ನಮ್ಮ ಸಹಮತವಿದೆ ಎಂದು ಹೇಳಿದೆ.