ಮಡಿಕೇರಿ, ನ. 28: ನೋಟ್ ನಿಷೇಧದ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿವಿಧ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಜಿಲ್ಲೆಯ ಹಲವೆಡೆ ಆಕ್ರೋಶ ಹಾಗೂ ಸಂಭ್ರಮಾಚರಣೆ ಕಂಡು ಬಂದಿತು.ಮಡಿಕೇರಿ ನಗರದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೆ, ಇನ್ನೊಂದೆಡೆ ಎಸ್‍ಡಿಪಿಐ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಯಿತು. ಮತ್ತೊಂದೆಡೆ ನಗರ ಬಿಜೆಪಿ ವತಿಯಿಂದ ಬ್ಯಾಂಕ್ ಅಂಚೆ ಕಚೇರಿಗಳಿಗೆ ತೆರಳಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಕಾಂಗ್ರೆಸ್‍ನಿಂದ ಆಕ್ರೋಶಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಏಕಾಏಕಿ ತರಾತುರಿಯಲ್ಲಿ ರಾತೋರಾತ್ರಿ ರೂ. 500 ಹಾಗೂ 1000 ಮುಖ ಬೆಲೆಯ ನೋಟುಗಳ ನಿಷೇಧದಿಂದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಮಹಿಳೆಯರು, ಗರ್ಭಿಣಿಯರು ಹಾಗೂ ವೃದ್ಧರೂ ಬ್ಯಾಂಕ್ ಎದುರು ಕ್ಯೂನಲ್ಲಿ ನಿಲ್ಲುವಂತಾಗಿದೆ. ಸುಮಾರು 60 ಮಂದಿ ಕ್ಯೂನಲ್ಲಿ ನಿಂತವರು ಮರಣ ಹೊಂದುವಂತಾಗಿದೆ. ನೋಟು ನಿಷೇಧದಿಂದ ಶ್ರೀಮಂತರು ಹಾಗೂ ಬಂಡವಾಳ ಶಾಹಿಗಳಿಗೆ ಪ್ರಯೋಜನವಾಗಿದೆಯೇ ಹೊರತು ಬಡವರು ಸಂಕಷ್ಟ ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ತರಾತುರಿಯಲ್ಲಿ ನೋಟು ನಿಷೇಧ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರ ಖಂಡನೀಯ. ಜನಸಾಮಾನ್ಯರು, ಮಹಿಳೆಯರು, ವೃದ್ಧರೂ ಕ್ಯೂನಲ್ಲಿ ನಿಲ್ಲುವಂತಾಗಿದೆ. ಮುಂದಿನ ಚುನಾವಣೆಯಲ್ಲಿ ಜನಸಾಮಾನ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಕೇಂದ್ರ ಸರ್ಕಾರ ಏಕಾಏಕಿ ನೋಟು ರದ್ದು ಮಾಡಿರುವದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ.

(ಮೊದಲ ಪುಟದಿಂದ) ಹಲವರು ಬ್ಯಾಂಕ್ ಎದುರು ಕ್ಯೂ ನಿಲ್ಲುವಂತಾಗಿದೆ. ಇದರಿಂದ ಹಲವರ ಸಾವು ಸಂಭವಿಸಿದೆ. ಬಡವರಿಗೆ ನೋಟು ನಿಷೇಧದಿಂದ ತೊಂದರೆಯಾಗಿದ್ದು, ಶ್ರೀಮಂತರು ಯಾರೂ ಕೂಡ ಕ್ಯೂನಲ್ಲಿ ನಿಲ್ಲುತ್ತಿಲ್ಲ. ಬಡಜನತೆ ಕ್ಯೂನಲ್ಲಿ ನಿಲ್ಲುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಗಾಂಧಿ ಮೈದಾನದಿಂದ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾಜಿ ಸಚಿವೆ ಸುಮಾವಸಂತ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಪ್ರಮುಖರಾದ ಟಿ.ಹೆಚ್. ಉದಯಕುಮಾರ್, ಅಬ್ದುಲ್ ರಜಾಕ್, ಮೈನಾ ಪುಷ್ಪಾಪೂಣಚ್ಚ, ಸದಾ ಮುದ್ದಪ್ಪ ಹಾಗೂ ಇನ್ನಿತರರು ಇದ್ದರು.

ಬಿಜೆಪಿಯಿಂದ ಸಂಭ್ರಮಾಚರಣೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಕಪ್ಪು ಹಣವನ್ನು ನಿಯಂತ್ರಿಸಲು ಯೋಜನೆ ರೂಪಿಸಿದೆ. ದೇಶದ ಆರ್ಥಿಕ ಪ್ರಗತಿಗೆ ನೋಟು ನಿಷೇಧ ಪ್ರಯೋಜನಕಾರಿಯಾಗಿದೆ ಎಂದು ಬಿಜೆಪಿ ಸೇರಿದಂತೆ ಇತರ ಸಂಘಟನೆ ಸಂಭ್ರಮಾಚರಣೆ ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಮಡಿಕೇರಿ ನಗರ ಬಿಜೆಪಿ ಘಟಕದ ವತಿಯಿಂದ ನಗರ ಬ್ಯಾಂಕ್‍ಗಳು ಅಂಚೆ ಕಚೇರಿಗಳಿಗೆ ತೆರಳಿ ಒತ್ತಡದ ಮಧ್ಯೆಯೂ ಉತ್ತಮವಾಗಿ ಕಾರ್ಯವೆಸಗಿದ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.

ಬಿಜೆಪಿ ನಗರ ಅಧ್ಯಕ್ಷ ಮಹೇಶ್ ಜೈನಿ ನೇತೃತ್ವದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಕೆ. ಅರುಣ್ ಕುಮಾರ್, ರವಿ ಬಸಪ್ಪ, ಬಾಲಚಂದ್ರ ಕಳಗಿ, ಮಡಿಕೇರಿ ತಾಲೂಕು ಅಧ್ಯಕ್ಷ ತಳೂರು ಕಿಶೋರ್‍ಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಜಗದೀಶ್, ಉಮೇಶ್ ಸುಬ್ರಮಣಿ, ನಗರಸಭಾ ಸದಸ್ಯ ಕೆ.ಎಸ್. ರಮೇಶ್, ಲಕ್ಷ್ಮಿ, ಐ.ಜಿ. ಶಿವಕುಮಾರ್, ಮಿನಾಜ್ ಪ್ರವೀಣ್, ಶಾರದಾ ನಾಗರಾಜ್ ಹಾಗೂ ಇನ್ನಿತರರು ಇದ್ದರು.

ಎಸ್‍ಡಿಪಿಐ ಪ್ರತಿಭಟನೆ

ನೋಟು ನಿಷೇಧದಿಂದ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ನರೇಂದ್ರ ಮೋದಿ ಸರ್ಕಾರ ನೀಡಿರುವ ಆಶ್ವಾಸನೆಗಳೆಲ್ಲವೂ ಹುಸಿಯಾಗಿದೆ. ವಿದೇಶದಿಂದ ಕಪ್ಪು ಹಣವನ್ನು ತಂದ ದೇಶದ ಜನರಿಗೆ ಹಂಚುವದಾಗಿ ನೀಡಿದ ಭರವಸೆ ಈಡೇರಿಸದೆ, ನೋಟು ಬದಲಾವಣೆ ಹಾಗೂ ಹಣ ಜಮಾ ಮಾಡುವದಕ್ಕಾಗಿ ಜನತೆ ಕ್ಯೂನಲ್ಲಿ ನಿಲ್ಲುವಂತಾಗಿದೆ. ಜನರ ಹಣವನ್ನು ತೆಗೆಯುವದಕ್ಕೂ ನಿರ್ಬಂಧ ಹೇರಿರುವದು ವಿಶ್ವದಲ್ಲೇ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ. ಸಣ್ಣ ಕೈಗಾರಿಕೆಗಳು ಮುಚ್ಚುವ ಆತಂಕ ಎದುರಾಗಿದೆ. ನೋಟು ನಿಷೇಧ ದೇಶದ ದೊಡ್ಡ ಉದ್ಯಮಿಗಳ ಪರವಾಗಿ ನರೇಂದ್ರ ಮೋದಿ ರೂಪಿಸಿದ್ದಾರೆ ಎಂದು ಆರೋಪಿಸಿ ಎಸ್‍ಡಿಪಿಐ ನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರು ನೋಟು ನಿಷೇಧದಿಂದಾಗಿ ಕ್ಯೂನಲ್ಲಿ ನಿಂತ ಸುಮಾರು 60ಮಂದಿ ಸಾವನ್ನಪ್ಪುವಂತಾಗಿದೆ. ಕಪ್ಪು ಹಣವನ್ನು ಈಗಾಗಲೇ ಬಿಳಿ ಹಣವನ್ನಾಗಿ ಕಾಳಧನಿಕರು ಪರಿವರ್ತಿಸಿದ್ದಾರೆ. ಈ ಮಧ್ಯೆಯೂ ಸಂಭ್ರಮಾಚರಣೆ ಕೈಗೊಂಡಿರುವದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಜಿಲ್ಲಾ ಖಜಾಂಚಿ ಅಬ್ದುಲ್ ಅಡ್ಕಾರ್, ನಗರಸಭಾ ಸದಸ್ಯರಾರ ಕೆ.ಜೆ. ಪೀಟರ್, ಮನ್ಸೂರ್, ಪ್ರಮುಖರಾದ ನೂರುದ್ದೀನ್ ಹಾಗೂ ಇನ್ನಿತರರು ಇದ್ದರು.